ಉದಯವಾಹಿನಿ, ಚಿಕ್ಕಮಗಳೂರು: ಬಿಂಡಿಗ ಐತಿಹಾಸಿಕ ದೇವಿರಮ್ಮನ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಭಕ್ತರು ಬೆಟ್ಟ ಹತ್ತಲು ಆರಂಭಿಸಿದ್ದಾರೆ.
ಸುಮಾರು 3ಸಾವಿರ ಅಡಿ ಎತ್ತರದ ಬೆಟ್ಟದಲ್ಲಿ ನೆಲೆಸಿ ವರ್ಷಕ್ಕೊಮ್ಮೆ ದರ್ಶನ ನೀಡುವ, ಶಕ್ತಿ ದೇವತೆಯ ಪ್ರತೀಕವೂ ಆಗಿರುವ ದೇವಿರಮ್ಮನ ದರ್ಶನ ಪಡೆಯಲು ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲೆಗಳ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ.
ದೀಪಾವಳಿ ಹಬ್ಬದ ಹಿಂದಿನ ದಿನ ಅಂದರೆ ನರಕ ಚತುರ್ದಶಿಯಂದು ಭಕ್ತರು ಬರಿಗಾಲಲ್ಲಿ ದುರ್ಗಮವಾದ ಬೆಟ್ಟವನ್ನೇರಿ ದೇವಿಯ ಮೂರ್ತಿ ಕಣ್ತಂಬಿಕೊಳ್ಳುವುದು ಇಲ್ಲಿನ ವಿಶೇಷ.
ಬೆಟ್ಟದಲ್ಲಿ ವರ್ಷಕ್ಕೊಮ್ಮೆ ವಿಶೇಷ ಪೂಜೆ, ಮಹಾಮಂಗಳಾರತಿ, ನಡೆಯಲಿದೆ. ಒಂದು ದಿನ ಮಾತ್ರವೇ ಭಕ್ತರು ಬೆಟ್ಟವೇರಲು ಅವಕಾಶವಿದೆ. ವಿವಿಧ ಜಿಲ್ಲೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬರುವ ಭಕ್ತರು ಬುಧವಾರ ಸಂಜೆಯಿಂದಲೇ ಇರುವೆಗಳ ಸಾಲಿನಂತೆ ಮೊಬೈಲ್ ಬೆಳಕು ಹಿಡಿದು ಬೆಟ್ಟ ಏರುತ್ತಿದ್ದಾರೆ.
ಹರಕೆ ಹೊತ್ತ ಭಕ್ತರು ಬಳೆ, ತುಪ್ಪದ ಬಟ್ಟೆ, ಕಟ್ಟಿಗೆಯನ್ನು ಹೊತ್ತು ಸಾಗಿ ದೇವಿಗೆ ಸಮರ್ಪಿಸುತ್ತಿದ್ದಾರೆ. ದೇವಿರಮ್ಮ ಬೆಟ್ಟ ಏರಲು ನಿರ್ದಿಷ್ಟ ದಾರಿಯಿಲ್ಲ ಕಲ್ಲು-ಮಳ್ಳಿನ ಕಡಿದಾದ ಹಾದಿಯಲ್ಲೇ ಸಾಗಬೇಕು. ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸುವ ದೇವಿಯ ದರ್ಶನವಾದ ಬಳಿಕ ಕುಳಿತುಕೊಳ್ಳದೇ ಬೆಟ್ಟದಿಂದ ಇಳಿಯಬೇಕು.
