ಉದಯವಾಹಿನಿ, ಹಾನಗಲ್: ಕೃಷಿಕರ ಸಡಗರ ಹೆಚ್ಚಿಸುವ ಹಬ್ಬ ದೀಪಾವಳಿ. ಅಲ್ಲಲ್ಲಿ ಕೊಬ್ಬರಿ ಹೋರಿಗಳ ಸ್ಪರ್ಧೆ ಹುರುಪು ತುಂಬಿಸುತ್ತದೆ. ವಿಶೇಷವಾಗಿ ಹಾನಗಲ್‌ನ ಗೌಳಿಗಲ್ಲಿಯಲ್ಲಿ ಪ್ರತಿ ದೀಪಾವಳಿಯಂದು ನಡೆಯುವ ಎಮ್ಮೆ ಕಾಳಗ ಆಕರ್ಷಣೆಯಾಗುತ್ತಿದೆ.ದೀಪಾವಳಿ ಹಬ್ಬದಂದು ಇಲ್ಲಿನ ಗೌಳಿ ಜನರು ಈ ವಿಶೇಷ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಮೈದುಂಬಿದ ಬಲಿಷ್ಠ ಎಮ್ಮೆಗಳು ತಮ್ಮ ಕರಾಮತ್ತು ಪ್ರದರ್ಶಿಸುತ್ತವೆ. ಈ ಎಮ್ಮೆ ಕಾಳಗಕ್ಕೆ ತನ್ನದೇ ಆದ ಇತಿಹಾಸವಿದೆ. ಇದು ಗೌಳಿಗರ ಸಂಪ್ರದಾಯವಾಗಿ ರೂಪುಗೊಂಡಿದೆ.ಹಿಂದಿನ ಕಾಲದಲ್ಲಿ ಹಾನಗಲ್ ಭಾಗದಲ್ಲಿ ಕಾಡು ಅಧಿಕವಾಗಿದ್ದ ವೇಳೆ ಆಹಾರಕ್ಕಾಗಿ ಮೇಯಲು ಹೋಗುತ್ತಿದ್ದ ಎಮ್ಮೆಗಳಿಗೆ ‌ಕ್ರೂರ ಮೃಗಗಳಿಂದ ರಕ್ಷಿಸಿಕೊಳ್ಳುವ ವಿಧಾನವನ್ನು ಅಂದಿನ ಗೌಳಿಗರು ಕಲಿಸಿಕೊಡುತ್ತಿದ್ದರಂತೆ. ಈ ಸಮರ ಕಲೆ ಇಂದು ಸಾಂಪ್ರದಾಯಿಕ ಎಮ್ಮೆ ಕಾಳಗವಾಗಿ ಪರಿವರ್ತಿತಗೊಂಡಿದೆ.
ದೀಪಾವಳಿ ಹಬ್ಬದಲ್ಲಿ ಇಲ್ಲಿ ನಡೆಯುವ ಎಮ್ಮೆ ಕಾಳಗ ವೀಕ್ಷಣೆಗೆ ಪಟ್ಟಣ ಮತ್ತು ಗ್ರಾಮೀಣ ಭಾಗದ ಸಾವಿರಾರು ಜನರು ಬರುತ್ತಾರೆ. ಎಮ್ಮೆ ಕಾಳಗದ ಕಣಕ್ಕೆ ಪೂಜೆ ಸಲ್ಲಿಸುವ ಹೊತ್ತಿನಲ್ಲಿ ಎಮ್ಮೆಗಳು ಸಮರಾಭ್ಯಾಸದ ಮೂಲಕ ಹೂಂಕರಿಸುವ ದೃಶ್ಯ ಮೈನವಿರೇಳಿಸುತ್ತದೆ.
ಹಾಲು ಮಾರುವ ವೃತ್ತಿಯ ಗೌಳಿಗರು, ತಮ್ಮ ಎಮ್ಮೆಗಳನ್ನು ತೊಳೆದು ಸ್ವಚ್ಚಗೊಳಿಸಿ, ಕೊಂಬುಗಳಿಗೆ ಬಣ್ಣ ಹಚ್ಚುತ್ತಾರೆ. ಮೈ ಮೇಲೆ ಶಾಲು, ಬಲೂನ್ ಕಟ್ಟಿ ಸಿಂಗಾರ ಮಾಡಿಕೊಂಡು ಬಂದಿರುತ್ತಾರೆ.
ಮಿರಿಮಿರಿ ಮಿಂಚುವ ಎಮ್ಮೆಗಳು ರೋಶಾವೇಷದಿಂದ ನುಗ್ಗಿ ಬಂದು ಹುಲಿ ಆಕೃತಿಯ ಚರ್ಮಕ್ಕೆ ಗುದ್ದುವ ದೃಶ್ಯ ರೋಮಾಂಚನ ಮೂಡಿಸುತ್ತದೆ. ಮಾಲೀಕನ ಜೊತೆಯಲ್ಲಿ ಅಖಾಡಕ್ಕೆ ನುಗ್ಗಿಬರುವ ಎಮ್ಮೆಗಳು, ಒಮ್ಮೆ ಚರ್ಮದ ಆಕೃತಿ ನೋಡಿದ ತಕ್ಷಣ ಹೂಂಕರಿಸುತ್ತವೆ. ಕೆಂಗಣ್ಣು ಬೀರಿ, ದೊಡ್ಡ ಹೆಜ್ಜೆಗಳನ್ನು ಇಡುತ್ತ, ಓಡಿ ಬಂದು ಚರ್ಮದ ಆಕೃತಿಗೆ ಬಲವಾಗಿ ಗುದ್ದು ಕೊಡುತ್ತವೆ.
ಸದಾ ಶಾಂತವಾಗಿರುವ, ನಿಧಾನ ನಡವಳಿಕೆಯ ಎಮ್ಮೆಗಳು ಕಾಳಗಕ್ಕೆ ನಿಂತರೆ, ಚಾಕಚಕ್ಯತೆ, ತಮ್ಮ ಬಲಿಷ್ಠತೆಯನ್ನು ತೋರುತ್ತವೆ ಎಂಬುದನ್ನು ಇಲ್ಲಿ ನಡೆಯುವ ಕಾಳಗ ನಿರೂಪಿಸುತ್ತದೆ.ಕಟ್ಟಿಗೆ ತುಂಡಿಗೆ ಜೋತು ಹಾಕಿ ನಿಲ್ಲಿಸಿದ್ದ ಹುಲಿ ಆಕೃತಿಯ ಚರ್ಮಕ್ಕೆ ಗುದ್ದಿದ ಬಳಿಕ ನೆಲಕ್ಕೆ ಬೀಳುತ್ತಿದ್ದ ಚರ್ಮವನ್ನು ಸಂಘಟಕರು ಎತ್ತಿ ಓಡಾಡುತ್ತಿದ್ದರೆ, ರೋಶಗೊಂಡ ಎಮ್ಮೆಗಳು ಚರ್ಮದ ಹಿಂದೆ ಬೆನ್ನು ಹತ್ತಿ ಮತ್ತೆ ಮತ್ತೆ ಡಿಚ್ಚಿ ಕೊಡುತ್ತವೆ.

Leave a Reply

Your email address will not be published. Required fields are marked *

error: Content is protected !!