ಉದಯವಾಹಿನಿ, ಚನ್ನಪಟ್ಟಣ: ತಾಲ್ಲೂಕಿನಲ್ಲಿ 4ನೇ ದಿನ ಪ್ರಚಾರ ಮುಂದುವರೆಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬುಧವಾರ ತಮ್ಮ ತಾತ ಮತ್ತು ಅಪ್ಪನ ಕೊಡುಗೆಗಳನ್ನು ಸ್ಮರಿಸಿ, ಅವುಗಳನ್ನು ಪ್ರಚಾರಕ್ಕೆ ಬಳಸಿಕೊಂಡರು.
ತಾಲ್ಲೂಕಿನ ಇಗ್ಗಲೂರು ಗ್ರಾಮದ ಸೋಮೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಾಲ್ಕನೇ ದಿನದ ಪ್ರಚಾರ ಆರಂಭಿಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ದೂರದೃಷ್ಟಿ ಇಟ್ಟುಕೊಂಡು ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದಾರೆ.ಇಂದೊಂದು ಐತಿಹಾಸಿಕ ಯೋಜನೆಯಾಗಿದೆ ಎಂದರು.ಈ ಭಾಗದಲ್ಲಿನ ರೈತರ ಸಮಸ್ಯೆಯನ್ನು ಅರಿತು ಜಲಾಶಯ ನಿರ್ಮಾಣ ಮಾಡಿದ್ದಾರೆ. ಇಂದು ಈ ಜಲಾಶಯವು ತಾಲ್ಲೂಕಿನ ನೂರಾರು ಕೆರೆಗಳಿಗೆ ನೀರು ನೀಡುತ್ತಿದೆ. ರೈತರ ಬಾಳಿಗೆ ಬೆಳಕಾಗಿದೆ ಎಂದು ಬಣ್ಣಿಸಿದರು.
ದೇವೇಗೌಡ ಅವರು ತಾಲ್ಲೂಕಿನ ನೀರಾವರಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಸತ್ತೇಗಾಲದಿಂದ ನೀರು ತರಲು ಸತ್ತೇಗಾಲ ಯೋಜನೆ ಮಾಡಿದ್ದಾರೆ. ಅನುದಾನ ಬಿಡುಗಡೆ ಮಾಡಿ ಯೋಜನೆ ಆರಂಭಿಸಿದರು. ರಾಮನಗರ ಜಿಲ್ಲೆ ಹಾಗೂ ತಾಲ್ಲೂಕಿನ ಮೇಲೆ ಕುಮಾರಸ್ವಾಮಿ ಅವರಿಗೆ ಅಪಾರ ಅಭಿಮಾನ ಮತ್ತು ಪ್ರೀತಿ ಇದೆ ಎಂದು ಹೇಳಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಕೋಲಾರ ಸಂಸದ ಮಲ್ಲೇಶ್ ಬಾಬು, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಹಾಪ್ ಕಾಮ್ಸ್ನಿರ್ದೇಶಕ ರಾಜಶೇಖರ್, ಸ್ಥಳೀಯ ಮುಖಂಡರಾದ ಗರಕಹಳ್ಳಿ ಕೃಷ್ಣೇಗೌಡ, ಇ.ತಿ.ಶ್ರೀನಿವಾಸ್, ಡಿಎಂಕೆ ಕುಮಾರ್, ಸರಗೂರು ರಾಮಚಂದ್ರು, ಹಾರೋಕೊಪ್ಪ ಶಿವಲಿಂಗೇಗೌಡ, ವೀರೇಗೌಡನದೊಡ್ಡಿ ಕುಮಾರ್ ಹಾಜರಿದ್ದರು.
‘ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತ ಚುನಾವಣೆ. ಎನ್‌ಡಿಎ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಬಂದಿದ್ದೇನೆ. ತಾಲ್ಲೂಕಿನ ಹಳ್ಳಿಹಳ್ಳಿಗಳಿಗೂ ಭೇಟಿ ನೀಡುತ್ತಿದ್ದೇನೆ. ತಾಯಂದಿರು ಹಿರಿಯರು ಯುವಕರು ಎಲ್ಲಾ ವರ್ಗದ ಜನರ ಅಭಿಮಾನ ಸಿಗುತ್ತಿದೆ. ಎಚ್.ಡಿ.ದೇವೇಗೌಡರು ಕುಮಾರಸ್ವಾಮಿ ಅವರು ಸಂಪಾದಿಸಿರುವ ಆಸ್ತಿ ಎಂದರೆ ಅದು ಜನರ ಪ್ರೀತಿ. ನನ್ನ ಮೇಲೆ ನಿರೀಕ್ಷೆಗೂ ಮೀರಿ ಪ್ರೀತಿ ಅಭಿಮಾನವಾಗಿ ವ್ಯಕ್ತವಾಗುತ್ತಿದೆ. ನನ್ನ ಮೇಲೆ ತಾಲ್ಲೂಕಿನ ಜನರು ಭರವಸೆ ಇಟ್ಟಿದ್ದಾರೆ. ಅದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
