ಉದಯವಾಹಿನಿ, ಮಹದೇಶ್ವರ ಬೆಟ್ಟ: ಇಲ್ಲಿ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದೇಶ್ವರ ಸ್ವಾಮಿಗೆ ಬುಧವಾರ ಎಣ್ಣೆ ಮಜ್ಜನ ಸೇವೆ ನೆರವೇರಿಸಲಾಯಿತು.
ಜಾತ್ರೆಯ ಎರಡನೇ ದಿನ ಸ್ವಾಮಿಗೆ ವಿಶೇಷ ಪೂಜೆಯ ಜೊತೆಗೆ ಎಣ್ಣೆ ಮಜ್ಜನ ಸೇವೆಯನ್ನು ಬೇಡಗಂಪಣ ಸಮುದಾಯದ ಅರ್ಚಕರು ನಡೆಸಿದರು.
ನಸುಕಿನಿಂದಲೇ ದೇವರಿಗೆ ವಿವಿಧ ಪೂಜೆಗಳನ್ನು ನೆರವೇರಿಸಿದ ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವಾಲಯಕ್ಕೆ ರಾಜ್ಯ ಮಾತ್ರವಲ್ಲದೇ ನೆರೆಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ಬಂದಿದ್ದರು. ಧರ್ಮ ದರ್ಶನವಲ್ಲದೆ ವಿಶೇಷವಾಗಿ ₹500, ₹300, ₹200 ದರದ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.
60 ವರ್ಷ ಮೇಲ್ಪಟ್ಟವರಿಗೆ ರಾಜಗೋಪುರದ ಮುಂಭಾಗ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದೇವಾಲಯಕ್ಕೆ ಬಂದಿದ್ದ ಭಕ್ತರು ಧೂಪದ ಸೇವೆ, ಪಂಜಿನ ಸೇವೆ, ಉರುಳುಸೇವೆ, ಬೆಳ್ಳಿ ರಥೋತ್ಸವ, ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನ ಸೇವೆಗಳಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು. ಸಂಜೆ ನಡೆದ ಚಿನ್ನದ ರಥೋತ್ಸದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದರು.
ದೂರದ ಊರುಗಳಿಂದ ಬಂದ ಭಕ್ತರು ರಂಗಮಂದಿರ ಆವರಣ, ರಾಜಗೋಪುರದ ಮುಂಭಾಗ ತಂಗಿದ್ದರು.
