ಉದಯವಾಹಿನಿ, ಬೆಂಗಳೂರು: ಬೆಂಗಳೂರು ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದ ಆರು ಜನರನ್ನು ಮಳೆಯ ನಡುವೆಯೂ ಪಾರು ಮಾಡಲು ಜೀವದ ಹಂಗು ತೊರೆದು ಅವಿರತವಾಗಿ ಶ್ರಮಿಸಿದ್ದ ಫಸ್ಟ್ ನ್ಯೂಸ್ ಕ್ಯಾಮರಾಮೆನ್ ಅವಿರಾಜ್ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿ, ನಗದು ಬಹುಮಾನ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ತಗಡೂರು, ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳು ಈ ರೀತಿಯಲ್ಲಿ ಸ್ಪಂದಿಸಿ ಜೀವಗಳನ್ನು ಉಳಿಸಿರುವುದು ಮಾದರಿಯ ನಡೆಯಾಗಿದೆ. ಆ ಕಾರಣಕ್ಕಾಗಿ ಮೊನ್ನೆ ಪಬ್ಲಿಕ್ ಟಿವಿ ಪಬ್ಲಿಕ್ ಟಿವಿಯ ವಿಜಯಕುಮಾರ್ ಮತ್ತು ನಾಗೇಶ್ ಅವರನ್ನು ಸನ್ಮಾನಿಸಲಾಗಿತ್ತು. ಅಂದು ಬರಲಾಗದ ಕಾರಣ ಅವಿರಾಜ್ ಅವರಿಗೆ ಈಗ ಸನ್ಮಾನ ಮಾಡಲಾಗುತ್ತಿದೆ ಎಂದರು.ಖ್ಯಾತ ಚಿತ್ರ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಮಾತನಾಡಿ, ಅನಿವಾರ್ಯ ಸಂದರ್ಭದಲ್ಲಿ ಧೈರ್ಯವಾಗಿ ನೀರಿನೊಳಗೆ ಇಳಿದು ಜೀವಗಳ ರಕ್ಷಣೆ ಮಾಡಿರುವುದು ಸಾಮಾನ್ಯ ಸಂಗತಿ ಅಲ್ಲ. ಅದಕ್ಕಾಗಿ ವೃತ್ತಿ ಪರವಾದ ಪತ್ರಕರ್ತರ ಸಂಘಟನೆ ಅವರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ ಎಂದರು.ಸಂಯುಕ್ತ ಕರ್ನಾಟಕ ಪತ್ರಿಕೆ ಕೆ.ವಿ.ಪರಮೇಶ್, ಬೆಂಗಳೂರು ನಗರ ಘಟಕದ ಸೋಮಶೇಖರ ಗಾಂಧಿ, ಹರೀಶ್ ಮಾತನಾಡಿ, ಅವರುಗಳ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಶ್ಲಾಘಿಸಿದರು.ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಪದಾಧಿಕಾರಿಗಳಾದ ಜೆ.ಸಿ.ಲೋಕೇಶ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರಿಕಟ್, ಶಿವರಾಜ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!