ಉದಯವಾಹಿನಿ, ಬೆಂಗಳೂರು: ಯಾವುದೇ ರೀತಿಯ ತನಿಖೆ ಎದುರಿಸಲು ನಾವು ಸಿದ್ಧರಿದ್ದೇವೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಅಕ್ರಮಗಳ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಪತ್ರ ಬರೆದು 15 ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬೊಮ್ಮಾಯಿಯವರು, ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರಕ್ಕೆ ಹೆದರಲ್ಲ. ಯಾವುದೇ ಆರೋಪ ಇರಲಿ, ದೂರು ಇರಲಿ, ಯಾವುದೇ ತನಿಖೆ ಬೇಕಾದರೂ ನಡೆಸಲಿ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಎಂದು ಈ ಹಿಂದೆಯೇ ಹೇಳಿದ್ದೂ, ದೂರನ್ನೂ ನೀಡಿದ್ದೆ.ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆಯಲ್ಲಿ ಎಫ್‌ಐಆರ್ ಆಗಿರಲಿಲ್ಲ. ಇದೀಗ ಹೊಸ ಸರ್ಕಾರ ರಚನೆಯಾಗಿದೆ, ಯಾವುದೇ ರೀತಿ ತನಿಖೆ ನಡೆಸಲಿ, ಎದುರಿಸಲು ನಾವು ಸಿದ್ಧ. ತನಿಖೆ ಪಾರದರ್ಶಕವಾಗಿರಲಿ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು, ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು ಎಂದು ಹೇಳಿದರು.
