ಉದಯವಾಹಿನಿ, ಬೆಂಗಳೂರು: ಭರವಸೆ ನೀಡಿದ್ದೀರಿ, ಗೆದ್ದು ಅಧಿಕಾರ ಹಿಡಿದಿದ್ದೀರಿ. ಐದು ಗ್ಯಾರಂಟಿ ಜಾರಿ ಮಾಡುವುದು ನಿಮ್ಮ ಜವಾಬ್ದಾರಿ ಎಂದು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಟಿ ಬೀಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಗೆ 135 ಸೀಟು ಕೊಟ್ಟ ಜನತೆಯ ‘ಗ್ಯಾರಂಟಿ ಬೇಡಿಕೆ’ಯಲ್ಲಿ ನ್ಯಾಯವಿದೆ. 5 ಗ್ಯಾರಂಟಿ ಜಾರಿ ರಾಜ್ಯ ಕಾಂಗ್ರೆಸ್ ಸರಕಾರದ ಜವಾಬ್ದಾರಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗುವುದಕ್ಕೆ ಮುನ್ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರೇ ಸಹಿ ಮಾಡಿಕೊಟ್ಟ ಕಾರ್ಡುಗಳು ಜನರ ಬಳಿ ಇವೆ. ಆ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.ದಿನನಿತ್ಯವೂ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಿರೀಕ್ಷೆಯೂ ಮೇರೆ ಮೀರುತ್ತದೆ, ಆಕ್ರೋಶವೂ ಹೆಚ್ಚುತ್ತಿದೆ. ಜನಾಕ್ರೋಶಕ್ಕೆ ಸಬೂಬು ಸರಿಯಲ್ಲ. ಏಕೆಂದರೆ, ನಿರೀಕ್ಷೆ ಮೂಡಿಸಿದ್ದು ಇವರೇ. ಈಗ ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ.ಗ್ಯಾರಂಟಿಗಳ ಬಗ್ಗೆ ಮಾಧ್ಯಮಗಳಲ್ಲಿ ಅಬ್ಬರಿಸಿದ ಇವರೇ, ಈಗ ಮೀನಾಮೇಷ ಎಂದರೆ ಜನ ಒಪ್ಪುವರೇ? ಎಂದು ಮಾಜಿ ಮುಖ್ಯಮಂತ್ರಿ ಅವರು ಕೇಳಿದ್ದಾರೆ.
