ಉದಯವಾಹಿನಿ, ಬೀದರ್: ಮನುಷ್ಯ ಸಂಸ್ಕಾರಿಯಾಗಿ ಬಾಳಿ ಇತರರಿಗೂ ಪರೋಪಕಾರಿಯಾಗಿ ಹೊರ ಹೊಮ್ಮಲು ಅಯ್ಯಾಚಾರ ಹಾಗೂ ಲಿಂಗದೀಕ್ಷೆ ಅಗತ್ಯವಾಗಿದೆ. ಒಟ್ಟಾರೆ ಶಿವದೀಕ್ಷೆ ಸಂಸ್ಕಾರದಿಂದ ಜೀವನ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಮೇಹಕರ, ತಡೋಳಾ ಹಾಗೂ ಡೋಣಗಾಪುರ ಶ್ರೀಮಠಗಳ ಅಧಿಪತಿ ಪೂಜ್ಯ ಷ.ಬ್ರ ರಾಜೇಶ್ವರ ಶಿವಾಚಾರ್ಯರು ನುಡಿದರು.
ಇತ್ತಿಚೀಗೆ ಚಿಟಗುಪ್ಪ ತಾಲೂಕಿನ ವಳಖಿಂಡಿ ಗ್ರಾಮದಲ್ಲಿ ಮಾತೋಶ್ರೀ ವಿದ್ಯಾದೇವಿ ತಾಯಿಯವರ ಸ್ಮರಣೋತ್ಸವ ಕಾರ್ಯಕ್ರಮ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷ ಸಹ ಜಂಗಮ ಮಕ್ಕಳಿಗೆ ಅಯ್ಯಾಚಾರ ಹಾಗೂ ಭಕ್ತರ ಮಕ್ಕಳಿಗೆ ಸಾಮೂಹಿಕ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.
ಮನುಷ್ಯ ಹುಟ್ಟಿನಿಂದ ಸಾಯುವ ವರೆಗೆ 15 ಸಂಸ್ಕಾರಗಳು ಆಚರಣೆ ಮಾಡಬೇಕಿದೆ. ಆಗ ಮಾತ್ರ ಆತ ಮಾನವನಾಗಲು ಸಾಧ್ಯ ಎಂದರು.
ಇಂದು ಮನುಷ್ಯ ತನ್ನ ಯಾಂತ್ರಿಕ ಬದುಕಿನಲ್ಲಿ ತನ್ನತನ ಮರೆತಿದ್ದಾನೆ. ಜೀವನದ ರಹಸ್ಯ ಕಂಡುಕೊಳ್ಳಲು ವಿಫಲನಾಗಿರುವನು. ಪ್ರಾಣಿಯಂತೆ ಬದುಕು ಸಾಗಿಸುವ ಮನುಷ್ಯನಿಗೆ ಮನುಷ್ಯತ್ವ ಬೇಕಿದೆ, ಅದಕ್ಕಾಗಿ ನಿತ್ಯ ಲಿಂಗಪೂಜೆ ಹಾಗೂ ಸಂತರ, ಸಾಧುಗಳ, ಮಠಾಧೀಶರ ಸಂಗ ಬೆಳೆಸಿಕೊಂಡು ಉಜ್ವಲ ಭವಿಷ್ಯದತ್ತ ಮುಖ ಮಾಡುವಂತೆ ತಿಳಿಸಿದರು.
