ಉದಯವಾಹಿನಿ , ಬೆಂಗಳೂರು: ಆಂಧ್ರದ ತಿರುಪತಿಯಿಂದ ಬೆಂಗಳೂರಿನ ಬಳೇಪೇಟೆಯಲ್ಲಿರುವ ಇರುವ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಪತಿಯೊಂದಿಗೆ ಬಂದಿದ್ದ ಲಕ್ಷ್ಮಿ (೨೫) ಎಂಬ ಗೃಹಿಣಿ ಸ್ನಾನಕ್ಕೆಂದು ತೆರಳಿದ ಸಂದರ್ಭದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.ಇದೀಗ ಈ ನಿಗೂಢ ಸಾವಿನ ತನಿಖೆಯನ್ನು ಪೋಲಿಸರು ಪ್ರಾರಂಭಿಸಿದ್ದಾರೆ. ಮೃತ ಲಕ್ಷ್ಮಿ ಬೆಳಗ್ಗೆ ೯.೩೦ರ ಸುಮಾರಿಗೆ ಸ್ನಾನ ಮಾಡಲು ಸ್ನಾನಗೃಹಕ್ಕೆ ತೆರಳಿದ್ದಾರೆ.
೨೫ ನಿಮಿಷ ಕಳೆದರೂ ಆಕೆ ಹೊರಗೆ ಬಾರದಿದ್ದಾಗ ಪತಿ ತಪಾಸಣೆ ನಡೆಸಿದ್ದು ಆಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ತಕ್ಷಣವೇ ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಸಮಯದಲ್ಲಿ ನನ್ನ ಹೆಂಡತಿಯ ಮುಖದಲ್ಲಿ ಗೀರು ಗುರುತುಗಳು ಕಂಡುಬಂದಿವೆ ಎಂದು ಮೃತ ಮಹಿಳೆ ಪತಿ ಆರೋಪಿಸಿದ್ದಾರೆ.
ಸ್ಥಳಕ್ಕೆ ಎಫ್‌ಎಸ್‌ಎಲ್ ಮತ್ತು ಎಸ್‌ಒಸಿಒ ತಂಡಗಳು ಭೇಟಿ ನೀಡಿ ಮಾದರಿ ಮತ್ತು ಸುಳಿವುಗಳನ್ನು ಸಂಗ್ರಹಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಸ್ನಾನಗೃಹದೊಳಗಿನ ಗ್ಯಾಸ್ ಗೀಸರ್‌ನಿಂದ ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಉಸಿರಾಡಿರುವುದರಿಂದ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.ಆದರೆ, ಗೀಸರ್ ಆಫ್ ಆಗಿತ್ತು ಎಂದು ಆಕೆಯ ಪತಿ ಹೇಳಿದ್ದಾರೆ. ಆಕೆಯ ಮುಖದ ಮೇಲಿನ ಗೀರುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
