ಉದಯವಾಹಿನಿ, ಬೆಂಗಳೂರು: ನಗರದ ಸಾರ್ವಜನಿಕ ಉದ್ಯಾನವನಗಳಲ್ಲಿ ಸಾಕು ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವ ಮಾಲೀಕರಿಗೆ ಹೆಚ್ಚು ದಂಡ ವಿಧಿಸುವಂತೆ ಸೂಚನೆ ನೀಡಿರುವ ಹೈಕೋರ್ಟ್ ಉದ್ಯಾನವನಗಳ ಸ್ವಚ್ಛತೆ ಕಾಯ್ದುಕೊಳ್ಳುವ ಕುರಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ನಗರದ ಉದ್ಯಾನವನಗಳಲ್ಲಿ ಸಾಕು ನಾಯಿಗಳಿಂದ ಆಗುತ್ತಿರುವ ಮಲ ವಿಸರ್ಜನೆಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಮೆಸೆರ್ಸ್ ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ (ಕೂಪ) ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ವಿಭಾಗೀಯ ಪೀಠ, ಹಲವು ಮಾರ್ಗಸೂಚಿಗಳನ್ನು ರಚಿಸಿ, ಅರ್ಜಿ ಇತ್ಯರ್ಥಪಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿಯನ್ನು ಹಿಂಪಡೆಯುವುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಉತ್ತೇಜನ ನೀಡುವ ಸಂದರ್ಭದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಬಾರದು ಎಂದಿರುವ ನ್ಯಾಯಪೀಠ, ವೈಯಕ್ತಿಕ ಹಿತಾಸಕ್ತಿ ಒಳಗೊಳ್ಳುವಿಕೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಲು ನಿರಾಕರಿಸಲು ಕಾರಣವಾಗಿರುತ್ತದೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅರ್ಜಿದಾರರು ಹಿಂಪಡೆಯಲು ಮುಂದಾದರೂ, ಅಂತಹ ಅರ್ಜಿ ಇತ್ಯರ್ಥಪಡಿಸುವ ಸಂದರ್ಭದಲ್ಲಿ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಬೇಕಾಗುತ್ತದೆ.
