ಉದಯವಾಹಿನಿ, ರಾಮನಗರ: ನಗರಸಭೆಯು ಅಧ್ಯಕ್ಷ ಮತ್ತು ಉಪಾಧ್ಯಕ್ಷರೆಂಬ ಸೂತ್ರಧಾರರಿಲ್ಲದೆ ಐದೂವರೆ ತಿಂಗಳನ್ನು ಪೂರೈಸಿದೆ. ಚನ್ನಪಟ್ಟಣ ಉಪ ಚುನಾವಣೆ ನೆಪದಲ್ಲಿ ನಗರದ ಆಡಳಿತವನ್ನು ಮುನ್ನಡೆಸಬೇಕಾದ ನಾವಿಕರ ಚುನಾವಣೆ ನನೆಗುದಿಗೆ ಬಿದ್ದಿದೆ. ಚುನಾಯಿತ ಜನಪ್ರತಿನಿಧಿಗಳಿದ್ದರೂ ಆಡಳಿತದ ಚುಕ್ಕಾಣಿ ಅಧಿಕಾರಿಗಳ ಕೈಯಲ್ಲಿದೆ. ಜಿಲ್ಲೆಯ ಮಾಗಡಿ ಮತ್ತು ಬಿಡದಿ ಪುರಸಭೆ, ಬಿಡದಿ ಮತ್ತು ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರವಾದ ಕನಕಪುರ ನಗರಸಭೆಗೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದು, ಅಧಿಕಾರವನ್ನೂ ಸ್ವೀಕರಿಸಿದ್ದಾರೆ.
ಆದರೆ, ಜಿಲ್ಲಾ ಕೇಂದ್ರವಾದ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗೆ ಇನ್ನೂ ಚುನಾವಣೆ ಭಾಗ್ಯ ಕೂಡಿ ಬಂದಿಲ್ಲ. ಉಪ ಚುನಾವಣೆ ಹಾಗೂ ನಗರಸಭೆ ಸದಸ್ಯರ ಪಕ್ಷಾಂತರದ ಕಾರಣಕ್ಕಾಗಿ, ಚನ್ನಪಟ್ಟಣದ ನಗರಸಭೆ ಚುನಾವಣೆ ವಿಳಂಬಕ್ಕೆ ಕಾರಣವಿದೆ. ಆದರೆ, ರಾಮನಗರದಲ್ಲಿ ಚುನಾವಣೆ ನಡೆಸದ ಚುನಾವಣಾಧಿಕಾರಿ ವಿರುದ್ಧ ನಗರಸಭೆ ಸದಸ್ಯರು, ರಾಜಕೀಯ ಮುಖಂಡರು ಹಾಗೂ ನಾಗರಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.ಮೊದಲ ಅವಧಿ 2024ರ ಮೇ 8ಕ್ಕೆ ಮುಕ್ತಾಯವಾಗಿದೆ. ಅಂದಿನಿಂದ ಇಂದಿನವರೆಗೆ ಐದೂವರೆ ತಿಂಗಳವರೆಗೆ ನಗರಸಭೆಯು ಆಡಳಿತಾಧಿಕಾರಿ ಹಿಡಿತದಲ್ಲಿದೆ.
