ಉದಯವಾಹಿನಿ, ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಅನುದಾನ ಹಾಗೂ ನೀರಾವರಿ ಯೋಜನೆಗಳ ಬಗ್ಗೆ ಸುದೀರ್ಘ ಮನವಿ ಸಲ್ಲಿಸಿದ್ದಾರೆ. ಕಡಿಮೆ ಅವಧಿಯ ಬೇಡಿಕೆಯಲ್ಲೇ ಭೇಟಿಗೆ ಸಮಯ ನೀಡಿದ್ದಕ್ಕಾಗಿ ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ. ನಾಲ್ಕು ಪ್ರಮುಖ ಬೇಡಿಕೆಗಳ ಜೊತೆಗೆ ರಾಜ್ಯದ ಹಲವು ವಿಚಾರಗಳ ಕುರಿತಂತೆ ಪ್ರಧಾನಿಯವರಿಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
ಮೊದಲಿಗೆ ನಬಾರ್ಡ್ನಿಂದ ರಾಜ್ಯದ ರೈತರಿಗೆ ನೀಡಲಾಗುವ ಕೃಷಿ ಸಾಲದ ರಿಯಾಯಿತಿ ಬಡ್ಡಿದರದ ಪ್ರಮಾಣವನ್ನು 5,600 ಕೋಟಿ ರೂ.ಗಳಿಂದ 2,340 ಕೋಟಿ ರೂ.ಗಳಿಗೆ ಕಡಿತ ಮಾಡಿರುವುದನ್ನು ಗಮನಕ್ಕೆ ತಂದಿದ್ದಾರೆ. ಒಟ್ಟಾರೆ ಶೇ.58 ರಷ್ಟು ಸಾಲದ ಮಿತಿ ಕಡಿತದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ರಾಜ್ಯಸರ್ಕಾರ ಬಡ್ಡಿರಹಿತ ಹಾಗೂ ರಿಯಾಯಿತಿ ಬಡ್ಡಿದರದ ಸಾಲವನ್ನು ರೈತರಿಗೆ ನೀಡುತ್ತಿದೆ. ಆರ್ಬಿಐ ಈ ಬಾರಿ ಸಾಲದ ಮಿತಿಯನ್ನು ಗಣನೀಯವಾಗಿ ಕಡಿಮೆ ಮಾಡಿರುವುದರಿಂದ ಕೃಷಿ ಸಾಲಗಳು ಕಡಿಮೆಯಾಗಲಿದೆ. ರೈತರು ತೊಂದರೆಗೊಳಗಾಗಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸೂಚನೆ ನೀಡಿ ಮೃದು ಕೃಷಿ ಸಾಲಗಳ ಪ್ರಮಾಣವನ್ನು ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ.
2023-24ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಲಾಗಿತ್ತು. ಆದರೆ ಬಿಡುಗಡೆಯಾಗಿಲ್ಲ. ಈ ಬಗ್ಗೆ ಹಲವು ಬಾರಿ ತಾವು ಕೇಂದ್ರದ ಗಮನ ಸೆಳೆದಿದ್ದೇವೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರಕ್ಕೆ ರವಾನಿಸಲಾಗಿದೆ. ಕೂಡಲೇ ಈ ಮೊತ್ತವನ್ನು ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ.
3ನೇಯದಾಗಿ ಕಾವೇರಿಗೆ ಮೇಕೆದಾಟು, ಮಹದಾಯಿಗೆ ಕಳಸಾ -ಬಂಡೂರಿ ಸಮತೋಲಿತ ಅಣೆಕಟ್ಟು ನಿರ್ಮಾಣ ಯೋಜನೆಗಳಿಗೆ ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಕೇಂದ್ರ ಪರಿಸರ ಸಚಿವಾಲಯದ ವನ್ಯ ಜೀವಿ ನಿರಾಕ್ಷೇಪಣಾ ಪತ್ರದ ಅಗತ್ಯವಿದೆ. ರಾಜ್ಯಸರ್ಕಾರ ಸ್ವಂತ ಸಂಪನೂಲಗಳಿಂದ ಯೋಜನೆಯನ್ನು ರೂಪಿಸಿದೆ.
