ಉದಯವಾಹಿನಿ, ಬೆಂಗಳೂರು: ಬಳ್ಳಾರಿಯ ಜಿಲ್ಲಾ ಆಸ್ಪತ್ರೆ ಹಾಗು ಬಿಮ್ಸೌ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಲ್ಲಿ ಐವರು ಬಾಣಂತಿಯರ ಸಾವಾಗಿದ್ದು ,ಘಟನೆ ಕುರಿತಾಗಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಬಗ್ಗೆ ತಜ್ಞರ ತಂಡ ತನಿಖೆ ಮಾಡಿ ನೀಡಿರುವ ವರದಿಯನ್ನ ಕಾಂಗ್ರೆಸ್‌‍ ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ನೈತಿಕೆ ಹೊಣೆ ಹೊತ್ತು ಆರೋಗ್ಯ ಸಚಿವದಿನೇಶ್‌ ಗುಂಡೂರಾವ್‌,ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸರಣಿ ಸಾವಿನ ಬೆನ್ನಲ್ಲೇ, ನ.16ರಂದು ಖಾಸಗಿ ಕಂಪನಿಯೊಂದು ಸರಬರಾಜು ಮಾಡಿರುವ ಔಷದಿಯನ್ನ ಬಳಕೆ ಮಾಡದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದ್ದಾರೆ.ಬಳ್ಳಾರಿಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿಗೂ ಈ ಸುತ್ತೋಲೆಗೂ ಏನಾದರೂ ಸಂಬಂಧವಿದೆಯೇ ,ಈ ಕಳಪೆ ಗುಣಮಟ್ಟದ ಔಷಧಿ ಪೂರೈಕೆಗೆ, ಬಳಕೆಗೆ ಹೊಣೆ ಯಾರು ? ಸರ್ಕಾರ ವರದಿಯನ್ನ ಮುಚ್ಚಿಡುವ ಮೂಲಕ ಯಾರನ್ನು ರಕ್ಷಿಸುತ್ತಿದೆ  ಎಂದು ಪ್ರಶ್ನೆ ಮಾಡಿದ್ದಾರೆ.ಇಡೀ ಕರ್ನಾಟಕವೇ ಬೆಚ್ಚಿ ಬೀಳುವ ಇಂತಹ ಆಘಾತಕಾರಿ ಘಟನೆ ನಡೆದಿದ್ದರೂ ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಾಗಲಿ ಇದರ ಬಗ್ಗೆ ಕ್ರಮ ಕೈಗೊಳ್ಳುವುದಿರಲಿ, ಕನಿಷ್ಠ ಪಕ್ಷ ಸಂತಾಪ ಕೂಡ ಸೂಚಿಸಿಲ್ಲ. ಇನ್ನು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್‌ ಆಹಮದ್‌ ಖಾನ್‌ ಅವರು ಈವರೆಗೂ ಜಿಲ್ಲೆಗೆ ಭೇಟಿ ನೀಡುವ ಗೋಜಿಗೂ ಹೋಗಿಲ್ಲ ಎಂದು ಅಶೋಕ್‌ಸರ್ಕಾರವನ್ನು ತಾರಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!