ಉದಯವಾಹಿನಿ, ಶಹಾಪುರ: ನಗರದ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲಾಗಿದ್ದ ಕೂಸಿಗೆ ಹಾಕಬೇಕಾಗಿದ್ದ ರಕ್ತವನ್ನು ಬೇರೆ ಕೂಸಿನ ರಕ್ತವನ್ನು ಹಾಕಿದ್ದರಿಂದ ಗುರುವಾರ ಕೂಸು ಅಸುನೀಗಿದ ಬಗ್ಗೆ ಆರೋಪ ಕೇಳಿ ಬಂದಿದೆ. ತಾಲ್ಲೂಕಿನ ಹೊತಪೇಟ ಗ್ರಾಮದ ತನುಶ್ರೀ ಪ್ರಕಾಶ ದಂಪತಿಗೆ 15 ದಿನದ ಹಿಂದೆ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಆಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಕೂಸಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದರು. ಅದರಂತೆ ಕೂಸಿನ ಪಾಲಕರು 9 ದಿನದ ಹಿಂದೆ ಖಾಸಗಿ ಆಸ್ಪತ್ರೆ ದಾಖಲಿಸಿದ್ದರು.
ಕೂಸಿನ ದೇಹದಲ್ಲಿ ರಕ್ತದ ಸಮಸ್ಯೆ ಇದ್ದು, ಬೇರೆ ರಕ್ತ ಹಾಕುವುದಾಗಿ ವೈದ್ಯರು ಸೂಚಿಸಿದ್ದರು. ಅದೇ ಖಾಸಗಿ ಆಸ್ಪತ್ರೆಯಲ್ಲಿ ರಕ್ತದ ಸಮಸ್ಯೆಯಿಂದ ಬಳಲುತ್ತಿದ್ದ ರೂಬಿನಾ ಬೇಗಂ ನಾಸೀರ್ ದಂಪತಿಯ ಕೂಸಿಗೆ ಹಾಕಬೇಕಿದ್ದ ರಕ್ತವನ್ನು ಮೃತ ಕೂಸಿಗೆ ಹಾಕಿದ್ದಾರೆ. ಇದರಿಂದ ಆರೋಗ್ಯದಲ್ಲಿ ಏರು ಪೇರಾಗಿ ಕೂಸು ಅಸುನೀಗಿದೆ. ಇದಕ್ಕೆ ವೈದ್ಯರ ನಿಷ್ಕಾಳಜಿಯೇ ಕಾರಣ’ ಎಂದು ಪಾಲಕರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
