ಉದಯವಾಹಿನಿ, ತಿರುಪತಿ: ತಿರುಪತಿ-ತಿರುಮಲದಲ್ಲಿ ಯಾವುದೇ ರಾಜಕೀಯ ಭಾಷಣ ಹಾಗೂ ದ್ವೇಷದ ಭಾಷಣಗಳಿಗೆ ಅವಕಾಶವಿಲ್ಲ, ಅವುಗಳಿಗೆ ನಿಷೇಧಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ- ಟಿಟಿಡಿ ಘೋಷಿಸಿದೆ. ತಿರುಮಲದ ಪಾವಿತ್ರತೆ ಹಾಗೂ ಆಧ್ಯಾತ್ಮಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ಹಾಗು ದ್ವೇಷ ಭಾಷಣಗಳನ್ನು ನಿಷೇಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲ ರಾಜಕೀಯ ನಾಯಕರು ಸೇರಿದಂತೆ ಕೆಲವರು ದೇವರ ದರ್ಶನ ಪಡೆದ ಬಳಿಕ ದೇವಸ್ಥಾನದ ಎದುರು ಮಾಧ್ಯಮಗಳ ಮುಂದೆ ರಾಜಕೀಯ ದ್ವೇಷದ ಹೇಳಿಕೆಗಳನ್ನು ನೀಡುವ ಮೂಲಕ ಆಧ್ಯಾತ್ಮಿಕತೆಗೆ ಧಕ್ಕೆ ಉಂಟುಮಾಡಿರುವುದು ಗಮನಕ್ಕೆ ಬಂದಿದೆ ಎಂದು ಟಿಟಿಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾಗಾಗಿ ತಿರುಪತಿಯಲ್ಲಿ ಯಾವುದೇ ರಾಜಕೀಯ ಹಾಗೂ ದ್ವೇಷದ ಭಾಷಣಗಳಿಗೆ ಅವಕಾಶವಿಲ್ಲ. ಈ ನಿರ್ಧಾರಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡುತ್ತೇವೆ ಎಂದರು. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಟಿಟಿಡಿ ಎಚ್ಚರಿಕೆ ನೀಡಿದೆ.
