
ಉದಯವಾಹಿನಿ, ಡೆಮಾಸ್ಕಸ್: ಇಸ್ರೇಲ್ ಸೇನೆಯು ಸಿರಿಯಾ ಮೇಲೆ ದಾಳಿ ನಡೆಸಿದೆ. ಸಿರಿಯಾ ರಾಜಧಾನಿ ಡೆಮಾಸ್ಕಸ್ ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಪ್ರವೇಶದ್ವಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಈ ದಾಳಿಯಲ್ಲಿ ದೇಶದ ರಕ್ಷಣಾ ಸಚಿವಾಲಯದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸಿರಿಯಾದ ಭದ್ರತಾ ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. “ಸಿರಿಯಾದ ಡಮಾಸ್ಕಸ್ ಪ್ರದೇಶದಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯ ಪ್ರವೇಶದ್ವಾರದ ಮೇಲೆ ದಾಳಿ ನಡೆಸಿದ್ದೇವೆ” ಎಂದು ಇಸ್ರೇಲಿ ಸೇನೆ ಹೇಳಿಕೆಯಲ್ಲಿ ದೃಢಪಡಿಸಿದೆ. ಈ ಬಗ್ಗೆ ಇಸ್ರೇಲ್ ಡಿಫೆನ್ಸ್ ಫೋರ್ಸಸ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. “ದಕ್ಷಿಣ ಸಿರಿಯಾದಲ್ಲಿ ಡ್ರೂಝ್ ನಾಗರಿಕರ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಆಡಳಿತದ ಕ್ರಮಗಳನ್ನು ಐಡಿಎಫ್ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ” ಎಂದು ಅದು ಹೇಳಿದೆ.
ದಕ್ಷಿಣ ಸಿರಿಯಾದ ಡ್ರೂಝ್ ಬಹುಸಂಖ್ಯಾತ ನಗರವಾದ ಸ್ವೀಡಾದಲ್ಲಿ ಸರ್ಕಾರಿ ಪಡೆಗಳು ಮತ್ತು ಸ್ಥಳೀಯ ಡ್ರೂಝ್ ಬಣಗಳ ನಡುವಿನ ಕದನ ವಿರಾಮ ಮುರಿದುಬಿದ್ದಿರುವ ನಡುವೆಯೇ ಈ ವೈಮಾನಿಕ ದಾಳಿ ನಡೆದಿದೆ. ಡ್ರೂಝ್ ಸಮುದಾಯವನ್ನು ರಕ್ಷಿಸಲು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.
