ಉದಯವಾಹಿನಿ, ಚಿಕ್ಕಮಗಳೂರು: ಕಾಫಿನಾಡಿನ ಜನರ ಬಹುದಿನದ ಕನಸಿನಂತೆ ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸೇವೆ ಆರಂಭವಾಗಲು ದಿನಗಣನೆ ಶುರುವಾಗಿದೆ. ತಿರುಪತಿಗೆ ರೈಲು ಓಡಾಟ ನಡೆಸುವ ಮೊದಲೇ ಹಿಂದೂ ಮುಸ್ಲಿಮರ ನಡುವೆ ರೈಲಿಗೆ ಹೆಸರಿಡುವ ವಿಚಾರವಾಗಿ ವಿವಾದ ಸೃಷ್ಟಿಯಾಗಿದ್ದು, ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು ಹೆಸರಿನ ವಿವಾದ ಪ್ರಧಾನಿ ನರೇಂದ್ರ ಮೋದಿ ಅವರ ಅಂಗಳಕ್ಕೂ ತಲುಪಿದೆ.
ದಕ್ಷಿಣ ಭಾರತದ ಅತಿ ದೊಡ್ಡ ವಿವಾದವಿರುವ ಸ್ಥಳ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಹಿಂದೂ, ಮುಸ್ಲಿಂರ ನಡುವೆ ನಾಲ್ಕು ದಶಕದಿಂದ ವಿವಾದವಿದ್ದು, ಹಿಂದೂಗಳು ಸಂಪೂರ್ಣ ದತ್ತಪೀಠಕ್ಕಾಗಿ ಹೋರಾಟ ನಡೆಸಿದ್ರೆ, ಮುಸ್ಲಿಮರು ಇದು ನಮ್ಮ ಬಾಬಾ ಬುಡನ್ ಸ್ವಾಮಿ ದರ್ಗಾ ಎಂದು ವಾದ ಮಾಡುತ್ತಾರೆ.ಸದ್ಯ ದತ್ತಪೀಠ ವಿವಾದ ಸುಪ್ರೀಂ ಕೋರ್ಟ್ ನಲ್ಲಿದ್ದು, ಇದೀಗ ಇದೇ ತಿಂಗಳ 17 ರಿಂದ ಆರಂಭವಾಗಲಿರುವ ಚಿಕ್ಕಮಗಳೂರು ಟು ತಿರುಪತಿ ಟ್ರೈನ್ಗೆ ಹೆಸರಿಡುವ ವಿಚಾರವಾಗಿ ದತ್ತಪೀಠ ಹೆಸರಿನ ವಿವಾದ ಮತ್ತೆ ಚಿಕ್ಕಮಗಳೂರಿನಲ್ಲಿ ಮುನ್ನೆಲೆಗೆ ಬಂದಿದೆ.
