ಉದಯವಾಹಿನಿ, ಶ್ರೀನಗರ: ಭಾರೀ ಸರಕು ವಾಹನ ಮತ್ತು ಪ್ರಯಾಣಿಕ ವಾಹನ ಎರಡನ್ನೂ 1994ರ ಕಾಯಿದೆಗೆ ತಿದ್ದುಪಡಿ ತಂದು ಸಾರಿಗೆ ವಾಹನ ಎಂಬ ಏಕೀಕೃತ ವರ್ಗದ ಅಡಿಯಲ್ಲಿ ತಂದಿರುವ ಹಿನ್ನೆಲೆಯಲ್ಲಿ ಭಾರೀ ಸರಕು ವಾಹನ ಚಲಾಯಿಸಲು ಪರವಾನಗಿ ಹೊಂದಿರುವ ಚಾಲಕ ಪ್ರಯಾಣಿಕ ಸೇವಾ ವಾಹನ ಚಲಾಯಿಸಲು ಕಾನೂನುಬದ್ಧವಾಗಿ ಸಮರ್ಥರು ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ತೀರ್ಪು ನೀಡಿದೆ.
ಮೋಟಾರು ವಾಹನ ಕಾಯಿದೆಯ ಸೆಕ್ಷನ್ 10(2)(ಇ) ಅಡಿಯ ವರ್ಗೀಕರಣದ ಪ್ರಕಾರ ಎಲ್ಲಾ ರೀತಿಯ ವಾಣಿಜ್ಯ ವಾಹನಗಳಿಗೆ ಪ್ರತ್ಯೇಕ ಪರವಾನಗಿ ನೀಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಮೊಹಮ್ಮದ್ ಯೂಸುಫ್ ವಾನಿ ತಿಳಿಸಿದರು. ಶಾಸಕಾಂಗವು 1994ರಲ್ಲಿ ತಿದ್ದುಪಡಿಯ ಮೂಲಕ ಉಪ-ವರ್ಗೀಕರಣ ತೆಗೆದುಹಾಕಿದ್ದು, ಭಾರೀ ಸರಕು ಮತ್ತು ಪ್ರಯಾಣಿಕ ವರ್ಗಗಳೆರಡಕ್ಕೂ ಸಾರಿಗೆ ವಾಹನದ ಪರವಾನಗಿ ಸಾಕಾಗುತ್ತದೆ ಎಂದು ಆದೇಶಿಸಿದೆ ಎಂಬುದಾಗಿ ನ್ಯಾಯಾಲಯ ಹೇಳಿತು.
