ಉದಯವಾಹಿನಿ, ಜಾರ್ಜಿಯಾ: 19 ವರ್ಷದ ದಿವ್ಯಾ ದೇಶಮುಖ್ ಫಿಡೆ ಮಹಿಳಾ ಚೆಸ್ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.ಭಾರತದ ಅನುಭವಿ ಚೆಸ್ ಆಟಗಾರ್ತಿ ಕೊನೆರು ಹಂಪಿ ವಿರುದ್ಧ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ದಿವ್ಯಾ ದೇಶಮುಖ್ ಅವರು ಗೆಲುವು ಸಾಧಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಜಯಿಸಿದರು. ಈ ಮೂಲಕ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ದಿವ್ಯಾ ದೇಶಮುಖ್ ಅವರು ಒಟ್ಟಾರೆ 88ನೇ ಇಂಡಿಯನ್ ಗ್ರಾಂಡ್ ಮಾಸ್ಟರ್ ಆಗಿದ್ದಾರೆ.ಫೈನಲ್‌ಗೆ ಮುನ್ನ 39 ವರ್ಷದ ಕೊನೆರು ಹಂಪಿ ಅವರೆ ಗೆಲ್ಲುವ ಫೇವರೇಟ್ ಆಗಿದ್ದರು. ಶನಿವಾರ ನಡೆದ ಫೈನಲ್‌ನಲ್ಲಿ ದಿವ್ಯಾ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದರೆ ಕೊನೆ ಕ್ಷಣದಲ್ಲಿ ದಿವ್ಯಾ ಮಾಡಿದ ತಪ್ಪು ನಡೆಯಿಂದ ಪಂದ್ಯವನ್ನು ಡ್ರಾ ಮಾಡುವಲ್ಲಿ ಹಂಪಿ ಯಶಸ್ವಿಯಾಗಿದ್ದರು. ಭಾನುವಾರ ನಡೆದ ಎರಡನೇ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಿದ್ದರಿಂದ ಪಂದ್ಯ ಟೈ-ಬ್ರೇಕ್ನತ್ತ ಸಾಗಿತ್ತು.
ಯಾರು ದಿವ್ಯಾ ದೇಶಮುಖ್..? ಮಹಾರಾಷ್ಟ್ರದ ನಾಗ್ಪುರದ ದಿವ್ಯಾ ದೇಶಮುಖ್ ಮರಾಠಿ ಕುಟುಂಬದಲ್ಲಿ ಜನಿಸಿದ್ದಾರೆ. ಇವರ ಪೋಷಕರು ವೈದ್ಯರಾಗಿದ್ದಾರೆ. ಭವನ್ಸ್ ಭಗವಾನ್‌ದಾಸ್ ಪುರೋಹಿತ ವಿದ್ಯಾ ಮಂದಿರಕ್ಕೆ ಸೇರಿದ್ದ ಇವರು ಬಾಲ್ಯದಲ್ಲೇ ಚೆಸ್ ಆಡಲು ಆರಂಭಿಸಿದ್ದರು.2022 ರ ಮಹಿಳಾ ಭಾರತೀಯ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಇವರು 2021 ರಲ್ಲಿ ಭಾರತದ 21 ನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಕಿರೀಟವನ್ನು ಪಡೆದಿದ್ದರು. 2020 ರ FIDE ಆನ್‌ಲೈನ್ ಒಲಿಂಪಿಯಾಡ್‌ನಲ್ಲಿ ಭಾರತ ಚಿನ್ನ ಗೆದ್ದಿತ್ತು. ಈ ತಂಡದಲ್ಲಿ ದಿವ್ಯಾ ಭಾಗಿಯಾಗಿದ್ದರು. 2022 ರ ಚೆಸ್ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
