ಉದಯವಾಹಿನಿ, ಬೆಂಗಳೂರು: ಹಲಸೂರು ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೈಕ್ ಅಂಗಡಿಗಳು ಸುಟ್ಟು ಕರಕಲಾಗಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ 15 ಬೈಕ್ ಬೆಂಕಿಗಾಹುತಿಯಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಕೃತ್ಯವನ್ನ ಕೆಲ ಕಿಡಿಗೇಡಿಗಳೇ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. 15 ಬೈಕ್ಗಳು ಹೊತ್ತಿ ಉರಿಯುವ ವೇಳೆ ಒಂದು ತರಕಾರಿ ಅಂಗಡಿಗೂ ಬೆಂಕಿ ತಗುಲಿದ್ದು, ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಯಾರೋ ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿದ್ದಾರೆಂದು ಎನ್ನುವ ಶಂಕೆ ವ್ಯಕ್ತವಾಗಿದೆ.
ಬೆಳಗ್ಗೆ 3 ಗಂಟೆ ಸುಮಾರಿಗೆ ಮೂವರು ಬಂದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸಿಸಿಟಿವಿಯಲ್ಲಿ ಮೂವರು ಅನಾಮಿಕರು ಓಡಾಡಿರುವುದು ಕಂಡು ಬಂದಿದೆ. ಇವರೇ ಬೆಂಕಿ ಇಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬೆಂಕಿಯಿಂದ ಹಲಸೂರು ಮಾರ್ಕೆಟ್‌ನ ಕಾಳಿಯಮ್ಮನ್ ದೇವಸ್ಥಾನಕ್ಕೂ ಹಾನಿಯಾಗಿದೆ. ಬೆಂಕಿ ಕೆನ್ನಾಲಿಗೆಗೆ ಪುರಾತನ ಅರಳಿ ಮರ ಕೂಡ ಸುಟ್ಟು ಹೋಗಿದೆ. 600 ವರ್ಷ ಹಳೆಯ ದೇವಸ್ಥಾನದ ಗೋಡೆಯೂ ಹಾಗೂ ಅರಳಿ ಮರಕ್ಕೂ ಹಾನಿಯಾದ ಕಾರಣ, ದೇವಸ್ಥಾನ ಆಡಳಿತ ಮಂಡಳಿ ಸೂಕ್ತ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದೆ.
