ಉದಯವಾಹಿನಿ, ಮುಂಬೈ: ವ್ಯಕ್ತಿಯೊಬ್ಬರ ಮೇಲೆ ದೈತ್ಯ ಹೆಬ್ಬಾವು ದಾಳಿ ಮಾಡಿರುವ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಹಾವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ದೈತ್ಯ ಹೆಬ್ಬಾವು ದಾಳಿ ಮಾಡಿ ಕೆನ್ನೆಗೆ ಕಚ್ಚಿದೆ. ವ್ಯಕ್ತಿಯ ಕೆನ್ನೆಗೆ ಕಚ್ಚಿದ ಹಾವು ಆತನ ಕೆನ್ನೆಯನ್ನು ಕಚ್ಚಿ 40 ಸೆಕೆಂಡುಗಳಿಗೂ ಹೆಚ್ಚು ಕಾಲ ಹಿಡಿದಿಟ್ಟುಕೊಂಡಿತ್ತು. ಸ್ಥಳದಲ್ಲಿದ್ದ ಜನರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಹರಸಾಹಸ ಪಟ್ಟು ಅಪಾಯಕಾರಿ ಹಾವಿನಿಂದ ಆ ವ್ಯಕ್ತಿಯನ್ನು ರಕ್ಷಿಸಲು ಅವರಿಗೆ ಸಾಧ್ಯವಾಯಿತು.
ಈ ಘಟನೆ ಎಲ್ಲಿ ನಡೆಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ವಿಡಿಯೊವನ್ನು ಸುಮಾರು ಎಂಟು ಗಂಟೆಗಳ ಹಿಂದೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಒಂದು ಕೈಯಲ್ಲಿ ಕೈಗವಸು ಧರಿಸಿದ ವ್ಯಕ್ತಿಯೊಬ್ಬರು ಹಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗ ಅದು ಆತನ ಮೇಲೆ ದಾಳಿ ಮಾಡುವುದನ್ನು ವಿಡಿಯೊದಲ್ಲಿ ನೋಡಬಹುದು. ಆ ವ್ಯಕ್ತಿ ವೃತ್ತಿಪರ ಹಾವು ಹಿಡಿಯುವವನಾಗಿದ್ದು, ಹೊಲದಲ್ಲಿದ್ದ ದೈತ್ಯ ಹೆಬ್ಬಾವನ್ನು ಹಿಡಿಯಲು ಹಳ್ಳಿಗರು ಆತನನ್ನು ಕರೆದಿದ್ದರು ಎನ್ನಲಾಗಿದೆ. ವಿಡಿಯೊದಲ್ಲಿ ಹೆಬ್ಬಾವು ಬಲೆಗೆ ಸಿಲುಕಿಕೊಂಡು ನೆಲದ ಮೇಲೆ ಬಿದ್ದಿರುವುದನ್ನು ನೋಡಬಹುದು. ಒಬ್ಬ ಮನುಷ್ಯ ಹಾವನ್ನು ಹಿಡಿಯುತ್ತಾನೆ. ಇನ್ನೊಬ್ಬ ಮನುಷ್ಯ ಅದರ ಕುತ್ತಿಗೆಯನ್ನು ಹಿಡಿಯಲು ಪ್ರಯತ್ನಿಸುತ್ತಾನೆ.
