ಉದಯವಾಹಿನಿ, ನವದೆಹಲಿ: ಲೋಕಸಭೆಯಲ್ಲಿ ನಡೆಯುತ್ತಿರುವ ಮಳೆಗಾಲದ ಮುಂಗಾರು ಅಧಿವೇಶನದಲ್ಲಿ ಇಂದು ಆಪರೇಷನ್ ಸಿಂಧೂರ್ (Operation Sindoor) ಕುರಿತು 16 ಗಂಟೆಗಳ ಚರ್ಚೆ ಆರಂಭಗೊಂಡಿದೆ. ಆಪರೇಷನ್ ಸಿಂಧೂರ್ ಕುರಿತ ಚರ್ಚೆಯನ್ನು ಸದನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಪ್ರಾರಂಭಿಸಿದರು. ಆ ಬಳಿಕ ಹಲವರು ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗ ಧ್ವನಿ ಎತ್ತಿದ್ದಾರೆ. ಇದೀಗ ವಿದೇಶಾಂಗ ಸಚಿವ ಜೈ ಶಂಕರ್ (Jai Shankar) ಮಾತನಾಡಿದ್ದು, ಕದನ ವಿರಾಮದ ಬಗ್ಗೆ ಇರುವ ಗೊಂದಲಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ.
ಸುದೀರ್ಘ ಚರ್ಚೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈ ಶಂಕರ್, ಏಪ್ರಿಲ್ 22 ರಿಂದ ಜೂನ್ 17 ರವರೆಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ. ಈ ಮೂಲಕ ಕದನ ವಿರಾಮದ ಬಗ್ಗೆ ಭಾರತ ಮತ್ತು ಅಮೆರಿಕ ನಡುವೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೋದಿ ಮತ್ತು ಟ್ರಂಪ್ ನಡುವೆ ಮಾತುಕತೆ ನಡೆದಿಲ್ಲ; ಜೈ ಶಂಕರ್
ಏಪ್ರಿಲ್ 22 ರಿಂದ ಜೂನ್ 17 ರವರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ನೇರವಾಗಿ ಅಥವಾ ಫೋನ್ ಸಂಭಾಷಣೆ ನಡೆದಿಲ್ಲ ಎಂದು ಜೈಶಂಕರ್ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು. ಈ ಮೂಲಕ ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಯುಎಸ್ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಪ್ರತೀಕಾರದ ದಾಳಿಯ ನಂತರ, ಪಾಕಿಸ್ತಾನ ಆಕ್ರಮಣವನ್ನು ನಿಲ್ಲಿಸಲು ಇಚ್ಛಿಸುತ್ತಿದೆ ಎಂದು ಸೂಚಿಸುವ ಫೋನ್ ಕರೆಗಳು ಭಾರತಕ್ಕೆ ಬಂದಿವೆ ಎಂದು ಜೈಶಂಕರ್ ಬಹಿರಂಗಪಡಿಸಿದರು. ಆದಾಗ್ಯೂ, ಅಂತಹ ಯಾವುದೇ ರೀತಿಯ ವಿನಂತಿಗಳು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಂದ (DGMO) ಔಪಚಾರಿಕವಾಗಿ ಬರಬೇಕು ಎಂದು ಭಾರತ ಸ್ಪಷ್ಟಪಡಿಸಿತು.
