ಉದಯವಾಹಿನಿ, ಮುಂಬೈ: ಜಿಮ್‌ನಲ್ಲಿ ವರ್ಕ್ಔಟ್ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಒಂದೇ ದಿನ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಪುಣೆ ಹಾಗೂ ಕೊಚ್ಚಿಯಲ್ಲಿ ನಡೆದಿದೆ. ಕೇರಳದ (Kerala) ಕೊಚ್ಚಿ ಮೂಲದ ರಾಜ್ (42) ಹಾಗೂ ಮಹಾರಾಷ್ಟ್ರದ ಪುಣೆಯ ಮಿಲಿಂದ್ ಕುಲಕರ್ಣಿ (37) ಮೃತರು.ಮೃತ ರಾಜ್ ಕೊಚ್ಚಿಯ ಜಿಮ್‌ವೊಂದರಲ್ಲಿ ವರ್ಕ್ಔಟ್ ಮಾಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತ ಮಿಲಿಂದ್ ಕಳೆದ ಆರು ತಿಂಗಳಿನಿಂದ ಪುಣೆಯ ಪಿಂಪ್ರಿ ಚಿಂಚ್ವಾಡದ ಜಿಮ್‌ಗೆ ತೆರಳುತ್ತಿದ್ದರು. ಅವಘಡ ಸಂಭವಿಸಿದ ದಿನ ಎಂದಿನಂತೆ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದರು. ವ್ಯಾಯಾಮ ಮಾಡಿ ನೀರು ಕುಡಿದ ನಂತರ ತಕ್ಷಣ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.ಮೂಲಗಳ ಪ್ರಕಾರ, ಇದಕ್ಕೂ ಮುನ್ನ ವೈದ್ಯೆಯಾಗಿದ್ದ ಮಿಲಿಂದ್ ಅವರ ಪತ್ನಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
