ಉದಯವಾಹಿನಿ, ನವದೆಹಲಿ: ಭಾರತವು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ ಸನಿಹದಲ್ಲಿ ಸೈನಿಕರ ಸಂಚಾರವನ್ನು ಸುಧಾರಿಸಲು ಮೂಲ ಸೌಕರ್ಯವನ್ನು ಸುಧಾರಿಸುತ್ತದೆ. 2017ರಲ್ಲಿ ಭಾರತ ಮತ್ತು ಚೀನಾ ನಡುವೆ ಡೋಕ್ಲಾಮ್‌ನಲ್ಲಿ  ಘರ್ಷಣೆ ಸಂಭವಿಸಿದ್ದ ಸ್ಥಳದ ಬಳಿ ಭೂತಾನ್‌ನಲ್ಲಿ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಈ ರಸ್ತೆಯು ಡೋಕ್ಲಾಮ್‌ನಿಂದ ಸುಮಾರು 21 ಕಿಲೋ ಮೀಟರ್ ದೂರದಲ್ಲಿರುವ ಭೂತಾನ್‌ನ ಹಾ ಕಣಿವೆಯನ್ನು ಸಂಪರ್ಕಿಸುತ್ತದೆ.
ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಸುಮಾರು 254 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಿಸಿದೆ. ಭೂತಾನ್‌ನ ಪ್ರಧಾನ ಮಂತ್ರಿ ತೊಬ್ಗೇ ಶೆರಿಂಗ್ ಶುಕ್ರವಾರ ಈ ರಸ್ತೆಯನ್ನು ಉದ್ಘಾಟಿಸಿದರು. ಈ ರಸ್ತೆಯು ಭೂತಾನ್‌ನ ಸ್ಥಳೀಯ ಜನರಿಗೆ ಸಂಚಾರ ಸೌಲಭ್ಯವನ್ನು ಒದಗಿಸುವುದರ ಜತೆಗೆ ಅಗತ್ಯವಿದ್ದರೆ ಭದ್ರತಾ ಪಡೆಗಳ ಚಲನೆಯನ್ನು ಸುಗಮಗೊಳಿಸುತ್ತದೆ. ಈ ರಸ್ತೆಯು ಟಿಬೆಟ್ ಸ್ವಾಯತ್ತ ಪ್ರದೇಶದ ಚುಂಬಿ ಕಣಿವೆಗೆ ತಲುಪುತ್ತದೆ. ಅಲ್ಲಿ ಚೀನಾದ ಸೈನಿಕರು ನಿಯೋಜನೆಗೊಂಡಿದ್ದಾರೆ. ಈ ರಸ್ತೆಯಿಂದ ಭೂತಾನ್ ಸೇನೆಗೆ ಚುಂಬಿ ಕಣಿವೆಯ ಗಡಿಗೆ ತಲುಪಲು ಮತ್ತು ಸರಬರಾಜು ಸಾಗಣೆಗೆ ಸಹಾಯವಾಗಲಿದೆ. ಭೂತಾನ್‌ಗೆ ಈಗ ಈ ರಸ್ತೆಯ ಲಾಭವಾದರೂ, ಭವಿಷ್ಯದಲ್ಲಿ ಭಾರತಕ್ಕೂ ಇದರಿಂದ ಪ್ರಯೋಜನವಾಗಲಿದೆ.
2017ರಲ್ಲಿ ಚೀನಾವು ಡೋಕ್ಲಾಮ್‌ನ ಜಾಮ್‌ಫೇರಿ ರಿಡ್ಜ್‌ಗೆ ರಸ್ತೆ ನಿರ್ಮಿಸಲು ಪ್ರಯತ್ನಿಸಿತ್ತು. ಭಾರತೀಯ ಸೇನೆಯು ‘ಆಪರೇಷನ್ ಜೂನಿಪರ್’ ಕಾರ್ಯಾಚರಣೆಯ ಮೂಲಕ ಈ ನಿರ್ಮಾಣವನ್ನು ತಡೆದು, ಡೋಕ್ಲಾಮ್‌ಗೆ ಪ್ರವೇಶಿಸಿ ಚೀನಾದ ಸೈನಿಕರನ್ನು ತಡೆಗಟ್ಟಿತ್ತು. 72 ದಿನಗಳ ಘರ್ಷಣೆಯ ನಂತರ ಚೀನಾದ ಸೇನೆ ಹಿಂದೆ ಸರಿಯಿತು. ಆದರೆ ನಂತರ ಚೀನಾವು ಡೋಕ್ಲಾಮ್‌ನಲ್ಲಿ ಮೂಲಸೌಕರ್ಯ ಮತ್ತು ಹೆಲಿಪ್ಯಾಡ್‌ಗಳನ್ನು ನಿರ್ಮಿಸಿ ಸೈನಿಕರನ್ನು ನಿಯೋಜಿಸಿತು. ಡೋಕ್ಲಾಮ್ ಭೂತಾನ್‌ನ ಬಳಿಯಿದ್ದು, ಸಿಕ್ಕಿಂ, ಭೂತಾನ್ ಮತ್ತು ಟಿಬೆಟ್‌ನ ಸಂಗಮದಲ್ಲಿದೆ. ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಇತ್ತೀಚೆಗೆ ಭೂತಾನ್‌ಗೆ ಭೇಟಿ ನೀಡಿದಾಗ ಹಾ ಕಣಿವೆ ರಸ್ತೆಯ ಬಗ್ಗೆ ಮಾಹಿತಿ ಪಡೆದರು. ಈ ರಸ್ತೆಯ ಉದ್ದಕ್ಕೂ ಐದು ಸೇತುವೆಗಳನ್ನು ನಿರ್ಮಿಸಲಾಗಿದ್ದು, ಇವು ಎಲ್ಲ ಹವಾಮಾನದಲ್ಲೂ ಸಂಚಾರಕ್ಕೆ ಸಹಾಯಕವಾಗಿವೆ. ಈ ರಸ್ತೆಯು ಬಿಆರ್‌ಒನ ‘ಪ್ರಾಜೆಕ್ಟ್ ಡಂಟಕ್’ನ ಭಾಗವಾಗಿದೆ. ಬಿಆರ್‌ಒ ನಿರ್ದೇಶಕ ಜನರಲ್ ಲೆಫ್ಟಿನೆಂಟ್ ಜನರಲ್ ರಘು ಶ್ರೀನಿವಾಸನ್ ಈ ಯೋಜನೆಯ ಪರಿಶೀಲನೆಗಾಗಿ ಭೂತಾನ್‌ಗೆ ಭೇಟಿ ನೀಡಿದ್ದು, ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಮ್‌ಗ್ಯೆಲ್ ವಾಂಗ್‌ಚುಕ್ ಮತ್ತು ಪ್ರಧಾನಮಂತ್ರಿ ತೊಬ್ಗೇ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಭೂತಾನ್‌ನ ಅಭಿವೃದ್ಧಿಯಲ್ಲಿ ಬಿಆರ್‌ಒನ ಪಾತ್ರವನ್ನು ಶ್ಲಾಘಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!