ಉದಯವಾಹಿನಿ, ಹಾವೇರಿ: ಬೆಳ್ಳಂಬೆಳಗ್ಗೆ ಕಾಡಿನಿಂದ ನಾಡಿಗೆ ಚಿರತೆಯೊಂದು ಆಗಮಿಸಿ ಮನೆಯಲ್ಲಿ ಅವಿತು ಕುಳಿತ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ನಾಡಗೇರ್ ಓಣಿಯಲ್ಲಿ ನಡೆದಿದೆ. ನಾಡಗೇರ್ ಓಣಿಯ ಖಾಕಿಯವರ ಮನೆಯಲ್ಲಿ ಅವಿತು ಕುಳಿತಿದ್ದ ಚಿರತೆಯ ಕಂಡು ಮನೆಯವರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದರು. ಇದೀಗ 25ಕ್ಕೂ ಅಧಿಕ ಅರಣ್ಯ ಇಲಾಖೆಯ ಸಿಬ್ಬಂದಿ ಸತತ 6 ಗಂಟೆಗಳಿಂದ ಚಿರತೆ ಸೆರೆಯ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿ ಮತ್ತು ಎಸ್ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರವಳಿಕೆ ತಜ್ಞರು ಸ್ಥಳದಲ್ಲಿ ದೌಡಾಯಿಸಿದ್ದಾರೆ. ನುರಿತ ತಜ್ಞರು, ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಹಾಗೂ ಡ್ರೋಣ್ ಕ್ಯಾಮೆರಾಗಳೊಂದಿಗೆ ಚಿರತೆ ಸೆರೆಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಇನ್ನು ಮನೆಯಲ್ಲಿ ಅವಿತು ಕುಳಿತ ಚಿರತೆಯನ್ನ ನೋಡಲು ಜನರು ಮುಗಿಬಿದ್ದಿದ್ದಾರೆ.
