ಉದಯವಾಹಿನಿ, ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಲ್ಲಿ ಕೇರಳ ಮೂಲದ 28 ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ನಾಪತ್ತೆಯಾದವರ ಕುಟುಂಬಸ್ಥರು ತಿಳಿಸಿದ್ದಾರೆ. ಭೀಕರ ಪ್ರವಾಹದಲ್ಲಿ ನಾಪತ್ತೆಯಾದ 28 ಜನರ ಪೈಕಿ 20 ಮಂದಿ ಕೇರಳ ಮೂಲದವರಾಗಿದ್ದು, ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಇನ್ನುಳಿದ 8 ಮಂದಿ ಕೇರಳದ ವಿವಿಧ ಜಿಲ್ಲೆಗಳ ನಿವಾಸಿಯಾಗಿದ್ದರು. ನಾಪತ್ತೆಯಾದವರಲ್ಲಿ ದಂಪತಿ ಕೂಡ ಇದ್ದರು. ಮೇಘಸ್ಫೋಟ ಸಂಭವಿಸುವ ಒಂದು ದಿನದ ಹಿಂದೆ ಅವರ ಮಗ ನಮಗೆ ಕೊನೆಯದಾಗಿ ಫೋನ್ ಮಾಡಿದ್ದರು. ಮರುದಿನ ಬೆಳಗ್ಗೆ 8:30ರ ಸುಮಾರಿಗೆ ಅವರು ಉತ್ತರಕಾಶಿಯಿಂದ ಗಂಗೋತ್ರಿಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಆ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಬಳಿಕ ನಮಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ದಂಪತಿಯ ಸಂಬಂಧಿಯೊಬ್ಬರು ಹೇಳಿದ್ದಾರೆ.
10 ದಿನಗಳ ಉತ್ತರಾಖಂಡ ಪ್ರವಾಸವನ್ನು ಏರ್ಪಡಿಸಿದ ಹರಿದ್ವಾರ ಮೂಲದ ಟ್ರಾವೆಲ್ ಏಜೆನ್ಸಿ ಕೂಡ ಪ್ರವಾಸಿಗರ ಕುರಿತು ಯಾವುದೇ ಅಪ್ಡೇಟ್ ಕೊಟ್ಟಿಲ್ಲ. ಅವರ ಫೋನ್‌ಗಳಲ್ಲಿ ಈಗ ಬ್ಯಾಟರಿ ಖಾಲಿಯಾಗಿರಬಹುದು. ಪ್ರಸ್ತುತ ಆ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ ಎಂದು ಸಂಬಂಧಿ ತಿಳಿಸಿದ್ದಾರೆ.
