ಉದಯವಾಹಿನಿ, ಲಕ್ನೋ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಗಂಗಾ ನದಿಯುದ್ದಕ್ಕೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಪ್ರವಾಹ ಪೀಡಿತ ಕಾನ್ಪುರದ ದೇಹತ್ ಪ್ರದೇಶಕ್ಕೆ ರಾಜ್ಯ ಕ್ಯಾಬಿನೆಟ್ ಸಚಿವ ಸಂಜಯ್ ನಿಶಾದ್ ಅವರು ಪರಿಶೀಲನೆಗಾಗಿ ತೆರಳಿದ್ದರು. ಈ ವೇಳೆ ವಿವಾದಾತ್ಮಕ ಹೇಳಿಕೆಯೊಂದು ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುವ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಜವಾಬ್ದಾರಿಯನ್ನು ನಿಶಾದ್ ಅವರಿಗೆ ವಹಿಸಲಾಗಿತ್ತು. ಈ ಹಿನ್ನೆಲೆ ಸಚಿವ ಸಂಜಯ್ ನಿಶಾದ್ ಅವರು ಕಾನ್ಪುರ ದೇಹತ್‌ನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಸಂಕಷ್ಟವನ್ನು ಸಚಿವರ ಮುಂದೆ ಹೇಳಿಕೊಂಡಿದ್ದಾರೆ.ಈ ವೇಳೆ ಸಚಿವರು ಮಾತನಾಡಿ, ನೀವು ಗಂಗೆಯ ಮಕ್ಕಳು, ಗಂಗಾ ನದಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತದೆ ಎಂದು ಪ್ರವಾಹ ಪೀಡಿತ ಗ್ರಾಮಸ್ಥರಿಗೆ ಹೇಳಿದ್ದಾರೆ. ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
