ಉದಯವಾಹಿನಿ, ನನೂಹ್: ಪಾರ್ಕಿಂಗ್ ವಿವಾದದಿಂದ ಉಂಟಾದ ಘರ್ಷಣೆಯಿಂದ ಹಲವಾರು ಅಂಗಡಿಗಳು ಸುಟ್ಟು ಹೋಗಿ, 12ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಹರಿಯಾಣದ (Haryana) ನುಹ್‌ನಲ್ಲಿ (Nuh) ನಡೆದಿದೆ. ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪಾರ್ಕಿಂಗ್ ಗೆ ಸಂಬಂಧಿಸಿ ಹರಿಯಾಣದ ನೂಹ್ ಜಿಲ್ಲೆಯ ಮುಂಡಕ ಮತ್ತು ಹಾಜಿಪುರ್ (Mundaka andu Hajipur) ಗ್ರಾಮಗಳ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿತ್ತು. ಇದು ಹಿಂಸಾಚಾರಕ್ಕೆ ತಿರುಗಿದ್ದು, ದ್ವಿಚಕ್ರ ವಾಹನಗಳು ಸೇರಿದಂತೆ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ.
ನುಹ್ ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ಮಂಗಳವಾರ ಪಾರ್ಕಿಂಗ್ ವಿಚಾರಕ್ಕೆ ವಿವಾದ ಉಂಟಾಗಿದ್ದು, ಘರ್ಷಣೆಗೆ ಕಾರಣವಾಯಿತು. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವು ವಾಹನಗಳು, ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ.ನುಹ್‌ನ ಮುಂಡಕ ಮತ್ತು ಹಾಜಿಪುರ್ ಗ್ರಾಮಗಳಿಗೆ ಸೇರಿದ ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿದ್ದು, ಹಿಂಸಾಚಾರದ ನಡುವೆ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಇದರಿಂದ ಈ ಪ್ರದೇಶದಲ್ಲಿ ಹಲವಾರು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಎರಡೂ ಕಡೆಯ ಜನರು ಕಲ್ಲು ತೂರಾಟ, ಗಾಜಿನ ಬಾಟಲಿಗಳ ತೂರಾಟ ನಡೆಸಿದರು. ಅಲ್ಲದೆ ಕೆಲವೆಡೆ ಬೆಂಕಿ ಹಚ್ಚಿದರು.

ಈ ಕುರಿತು ಪ್ರತಿಕ್ರಿಯಿಸಿರುವ ನುಹ್ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್, ಘರ್ಷಣೆ ಉಂಟಾದ ಪ್ರದೇಶದಲ್ಲಿ ಒಂದು ಪಡೆ ನಿಯೋಜಿಸಲಾಗಿದೆ ಮತ್ತು ಪಾರ್ಕಿಂಗ್ ಸ್ಥಳಕ್ಕಾಗಿ ಇಬ್ಬರು ಯುವಕರ ನಡುವೆ ಜಗಳ ನಡೆದಿದೆ. ಇಲ್ಲಿ ಯಾವುದೇ ರೀತಿಯ ಗಲಭೆ ಉಂಟಾಗಿಲ್ಲ. ಈ ಕುರಿತು ಫಿರೋಜ್‌ಪುರ ಝಿರ್ಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಹಳ್ಳಿಯ ವ್ಯಕ್ತಿಯೊಬ್ಬ ತನ್ನ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ವಾಗ್ವಾದ ಉಂಟಾಗಿದೆ. ಅನಂತರ ಇನ್ನೊಬ್ಬ ವ್ಯಕ್ತಿ ವಾಹನವನ್ನು ತೆಗೆಯಲು ಹೇಳಿದ್ದು ಸಂಘರ್ಷಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಕಾರು ಮಾಲೀಕರು ಗಾಜಿನ ಬಾಟಲಿಯಿಂದ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘರ್ಷಣೆಯ ವೇಳೆ ಸಾಮೂಹಿಕ ಕಲ್ಲು ತೂರಾಟವು ನಡೆದಿದೆ. ಒಂದು ಮೋಟಾರ್ ಸೈಕಲ್ ಮತ್ತು ರಸ್ತೆಬದಿಯ ಸಣ್ಣ ಅಂಗಡಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಸುಮಾರು 10 ಮಂದಿ ಗಾಯಗೊಂಡಿರುವುದಾಗಿ ಗ್ರಾಮದ ಸರಪಂಚ್ ರಾಮ್ ಸಿಂಗ್ ಸೈನಿ ತಿಳಿಸಿದ್ದಾರೆ. ಸಣ್ಣ ಸಂಘರ್ಷವನ್ನು ಕೋಮು ವಿವಾದವನ್ನಾಗಿ ಮಾಡುವ ಪ್ರಯತ್ನಗಳು ನಡೆದಿವೆ. ಆದರೆ ಪೊಲೀಸರು ತ್ವರಿತ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಫಿರೋಜ್‌ಪುರ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಹಿಂಸಾಚಾರದಲ್ಲಿ ಭಾಗಿಯಾದವರನ್ನು ಹಿಡಿಯಲು ಹುಡುಕಾಟ ಆರಂಭಿಸಲಾಗಿದೆ ಎಂದು ರಾಜೇಶ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!