ಉದಯವಾಹಿನಿ, ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.0 ತೀವ್ರತೆಯ ಪ್ರಬಲ ಭೂಕಂಪದಿಂದ 1,411ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಸುಮಾರು 3,124 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪ ಸಂಭವಿಸಿತ್ತು. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ತೀವ್ರ ಹಾನಿಗೊಳಗಾದ ಕುನಾರ್ ಪ್ರಾಂತ್ಯದಲ್ಲಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಕುನಾರ್‌ನಲ್ಲಿ ನೆಲಸಮವಾದ ಮನೆಗಳ ಅವಶೇಷಗಳಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಕರ್ತರು ಮಂಗಳವಾರವೂ ಹುಡುಕಾಟ ನಡೆಸಿದ್ದಾರೆ. ದೂರದ ಹಳ್ಳಿಗಳಲ್ಲಿ ಗಾಯಗೊಂಡವರನ್ನು ಸ್ಥಳಾಂತರಿಸುವ ಕೆಲಸ ಇನ್ನೂ ನಡೆಯುತ್ತಿದೆ. ಸಾರ್ವಜನಿಕರು ಸಹ ಬರಿ ಕೈಯಲ್ಲೇ ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ. ಅಫ್ಘಾನಿಸ್ತಾನದ ಸಂಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡಲು, ಭಾರತವು ಡೇರೆಗಳು ಮತ್ತು ಆಹಾರ ಸಾಮಗ್ರಿಗಳನ್ನು ದೇಶಕ್ಕೆ ರವಾನಿಸಿದೆ ಎಂದು ಜೈಶಂಕರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ನೆರವು ನೀಡಲಾಗುವುದು ಎಂದಿದ್ದಾರೆ.ಭಾರತ ಇಂದು ಕಾಬೂಲ್‌ನಲ್ಲಿ 1000 ಕುಟುಂಬ ಡೇರೆಗಳನ್ನು ತಲುಪಿಸಿದೆ. ಭಾರತೀಯ ಮಿಷನ್ 15 ಟನ್ ಆಹಾರ ಸಾಮಗ್ರಿಗಳನ್ನು ತಕ್ಷಣವೇ ಕಾಬೂಲ್‌ನಿಂದ ಕುನಾರ್‌ಗೆ ಸಾಗಿಸುತ್ತಿದೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!