ಉದಯವಾಹಿನಿ, ಲೆಹ್: ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. 4 ಜನ ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಲಡಾಖ್ ಅಪೆಕ್ಸ್ ಬಾಡಿ (LAB) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಹಲವು ವಾಹನಗಳು ಸುಟ್ಟಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.
ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವುದರಿಂದ ಪ್ರತಿಭಟನೆ ತೀವ್ರಗೊಂಡಿದೆ ಎಂದು ಎಲ್‌ಎಬಿ ಸಂಘಟಕರು ಆರೋಪಿಸಿದ್ದಾರೆ. ಹಿಂಸಾಚಾರ ತೀವ್ರಗೊಂಡ ಬೆನ್ನಲ್ಲೇ ಕೇಂದ್ರ ಆಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ರ ಸೆಕ್ಷನ್ 163 ರ ಅಡಿಯಲ್ಲಿ ಕರ್ಫ್ಯೂ ಹೇರಿ ತಕ್ಷಣವೇ ಲೇಹ್‌ನಲ್ಲಿ ಪ್ರತಿಭಟನೆಗಳು ನಿಷೇಧಿಸಿದೆ.
ಸೆ.10ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 15 ಜನರಲ್ಲಿ ಇಬ್ಬರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದಾದ ನಂತರ ಎಲ್‌ಎಬಿ ಯುವ ಘಟಕವು ಬಂದ್ ಮತ್ತು ಬೃಹತ್ ಪ್ರತಿಭಟನೆಗೆ ಕರೆ ನೀಡಿತು. ಹಿಂಸಾಚಾರ ಹಿನ್ನೆಲೆಯಲ್ಲಿ ಹೋರಾಟಗಾರ ಸೋನಮ್ ವಾಂಗ್ ಚುಕ್ ) ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಲಡಾಖ್‌ಗೆ ರಾಜ್ಯದ ಮಾನ್ಯತೆ ನೀಡುವುದು ಮತ್ತು ಆರನೇ ಪರಿಚ್ಛೇದದಡಿಯಲ್ಲಿ ಸೇರಿಸುವ ಬೇಡಿಕೆ ಈಡೇರಿದಾಗ ಮಾತ್ರ ತಮ್ಮ ಹೋರಾಟವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
