ಉದಯವಾಹಿನಿ, ರಾಯ್ಪುರ್: ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಅರೆಸ್ಟ್ ಆಗಿ, ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಚೈತನ್ಯ ಬಘೇಲ್‌ರನ್ನು ಭ್ರಷ್ಟಾಚಾರ ನಿಗ್ರಹ ದಳ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದೆ.
ಜುಲೈ 18 ರಂದು ಜಾರಿ ನಿರ್ದೇಶನಾಲಯ ಬಂಧಿಸಿದಾಗಿನಿಂದ ಚೈತನ್ಯ ನ್ಯಾಯಾಂಗ ಬಂಧನದಲ್ಲಿದ್ದರು. ಚೈತನ್ಯ ಸೇರಿದಂತೆ ಮತ್ತೊಬ್ಬ ಆರೋಪಿಯನ್ನು ಎಸಿಬಿ ಬುಧವಾರ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಅಕ್ಟೋಬರ್ 6 ರವರೆಗೆ ಎಸಿಬಿ ಕಸ್ಟಡಿಗೆ ಒಪ್ಪಿಸಿದೆ.ಕಳೆದ ಜನವರಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಕೋನಗಳ ಕುರಿತು ಎಸಿಬಿ ತನಿಖೆ ನಡೆಸುತ್ತಿದೆ. ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2019 ಮತ್ತು 2022 ರ ನಡುವೆ 2,500 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಮದ್ಯ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಸುಮಾರು 1,000 ಕೋಟಿ ರೂ.ಗಳನ್ನು ವೈಯಕ್ತಿಕವಾಗಿ ನಿರ್ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.
