ಉದಯವಾಹಿನಿ, ದೆಹಲಿ : ಸಾಧಿಸುವ ಛಲವಿದ್ದರೆ ಯಾವ ಅಂಶವೂ ನಮ್ಮನ್ನು ತಡೆಯಲಾರದು ಎನ್ನುವ ಮಾತಿದೆ. ಈ ಮಾತಿಗೆ ಉತ್ತಮ ಉದಾಹರಣೆ ಚಿದಂಬರಂ ಭಟ್ ಭಾರತದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಅವರು ಇಂದು ಜಗತ್ತನ್ನು ಆಳುತ್ತಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಮೆರಿಕದ ಇಂಟೆಗ್ರಲ್ ಟೆಕ್ನಾಲಜೀಸ್‌ ಕಂಪೆನಿಯ ಸಹ-ಸಂಸ್ಥಾಪಕ ಮತ್ತು ಸಿಟಿಒ ಎನಿಸಿಕೊಂಡಿದ್ದಾರೆ. ಅವರ ಈ ಪ್ರಯಾಣವೇನೂ ಹೂ ಹಾಸಿನ ದಾರಿಯಾಗಿರಲಿಲ್ಲ. ಆದರೆ ಸ್ಪಷ್ಟ ಗುರಿ ಹೊಂದಿದ್ದ ಅವರ ದೃಢ ಸಂಕಲ್ಪವೇ ಇಂದಿನ ಈ ಯಶಸ್ಸಿಗೆ ಕಾರಣ.

ಚಿದಂಬರಂ ಭಟ್ ಅವರ ಈ ಪ್ರಯಾಣವು ಭಾರತದ ಒಂದು ಸಣ್ಣ ಹಳ್ಳಿಯಲ್ಲಿ ಪ್ರಾರಂಭವಾಯಿತು. ಅಲ್ಲಿ ನೆಟ್ಟಗೆ ವಿದ್ಯುತ್ ಸೌಕರ್ಯವೂ ಇರಲಿಲ್ಲ. ಇನ್ನು ಆಧುನಿಕ ತಂತ್ರಜ್ಞಾನದ ಮಾತು ದೂರವೇ ಬಿಡಿ. ಚಿಕ್ಕಪ್ಪ ಉಡುಗೊರೆಯಾಗಿ ನೀಡಿದ ಸರಳ ಡಿಜಿಟಲ್ ವಾಚ್‌ ಚಿದಂಬರಂ ಭಟ್ ಅವರ ಯೋಚನಾ ಧಾಟಿಯನ್ನೇ ಬದಲಾಯಿಸಿ ಬಿಟ್ಟಿತು. ಈ ಸಣ್ಣ ಯಂತ್ರದಿಂದ ಆಕರ್ಷಿತರಾದ ಅವರು, ಅದರ ಕಾರ್ಯ ವಿಧಾನವನ್ನು ಅರ್ಥ ಮಾಡಿಕೊಳ್ಳಲು ಬಿಡಿಸಿದರು. ಅವರಿಗೆ ಮತ್ತೆ ಅದನ್ನು ಜೋಡಿಸಲು ಸಾಧ್ಯವಾಗಲಿಲ್ಲ. ಆದರೆ ಆ ಕ್ಷಣವು ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಜಿಜ್ಞಾಸೆಯನ್ನು ಅವರಲ್ಲಿ ಹುಟ್ಟುಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲಿಂದ ಬಳಿಕ ಅವರ ಜೀವನದ ಗತಿಯೇ ಬದಲಾಯಿತು.
ಆಗ ಮೂಡಿದ ಕುತೂಹಲದ ಕಿಡಿಯೊಂದು ಅವರನ್ನು ಅಮೆರಿಕದ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪದವಿ ಅಧ್ಯಯನದವರೆಗೆ ತಂದು ನಿಲ್ಲಿಸಿತು. ಜತೆಗೆ ವಿಶ್ವದ ಅತ್ಯಂತ ಬೇಡಿಕೆಯ ತಂತ್ರಜ್ಞಾನಗಳಲ್ಲಿ ಒಂದಾದ ಎಐ ಮೂಲಕ ವೃತ್ತಿ ಜೀವನ ಆರಂಭಿಸಲು ಕಾರಣವಾಯಿತು. ಪ್ರಸ್ತುತ ಚಿದಂಬರಂ ಭಟ್ ಇಂಟೆಗ್ರಲ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕ ಮತ್ತು ಸಿಟಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಎಐ ಚಾಲಿತ ಫಿನ್‌ಟೆಕ್ ಕಂಪೆನಿ.

Leave a Reply

Your email address will not be published. Required fields are marked *

error: Content is protected !!