ಉದಯವಾಹಿನಿ, ನವದೆಹಲಿ, : ಗಾಜಾ ಕದನ ವಿರಾಮ ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಮಾಡಿಕೊಂಡ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಅದರ ಬೆನ್ನಲ್ಲೇ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿಯನ್ನು ಹೊಗಳಿದ್ದಾರೆ. ಭಾರತ ಅತ್ಯುತ್ತಮ ದೇಶ. ಅದನ್ನು ಮುನ್ನಡೆಸುತ್ತಿರುವವರು ನನ್ನ ಉತ್ತಮ ಸ್ನೇಹಿತ ಎಂದು ಟ್ರಂಪ್ ಹೇಳಿದ್ದಾರೆ. ವಿಶೇಷವೆಂದರೆ, ಟ್ರಂಪ್ ಈ ಹೇಳಿಕೆ ನೀಡುವಾಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಟ್ರಂಪ್ ಹಿಂದೆಯೇ ನಿಂತುಕೊಂಡಿದ್ದರು.ಇಸ್ರೇಲ್-ಹಮಾಸ್ ಕದನ ವಿರಾಮ ಒಪ್ಪಂದದ ನಂತರ ಈಜಿಪ್ಟ್ ನಗರದಲ್ಲಿ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ಜತೆಯಾಗಿ ಚೆನ್ನಾಗಿ ಮುಂದುವರಿಯಲಿವೆ ಎಂಬುದು ನನ್ನ ಭಾವನೆ ಎಂದರು.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಭಾರತ ಒಂದು ಅದ್ಭುತ ದೇಶವಾಗಿದ್ದು, ನನ್ನ ಒಬ್ಬ ಆತ್ಮೀಯ ಸ್ನೇಹಿತ ಉನ್ನತ ಸ್ಥಾನದಲ್ಲಿದ್ದು ಮುನ್ನಡೆಸುತ್ತಿದ್ದಾರೆ. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಒಟ್ಟಿಗೆ ತುಂಬಾ ಚೆನ್ನಾಗಿ ಬದುಕಲಿವೆ ಎಂದು ನಾನು ಭಾವಿಸುತ್ತೇನೆ’ ಎಂದ ಟ್ರಂಪ್ ಹಿಂದೆ ತಿರುಗಿ ಶೆಹಬಾಜ್ ಷರೀಫ್ ಮುಖ ನೋಡಿದರು. ಅಲ್ಲದೆ, ಪಾಕ್ ಪ್ರಧಾನಿಯ ಮುಖ ನೋಡಿ, ‘ಹೌದಲ್ಲವೇ’ ಎಂದು ಪ್ರಶ್ನಿಸಿದರ. ಆಗ ಪಾಕಿಸ್ತಾನ ಪ್ರಧಾನಿ ನಗೆಯಾಡುತ್ತಾ ಹೌದೆಂದು ತಲೆಯಾಡಿಸಿದರು.
