ಉದಯವಾಹಿನಿ, ದಿಸ್‌ಪುರ : ಮಾವೋವಾದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶನಿವಾರ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಐಪಿಲ್ ಮುರ್ಮು ಅಲಿಯಾಸ್ ರೋಹಿತ್ ಮುರ್ಮು ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಎನ್‌ಕೌಂಟರ್ ನಡೆದಿದೆ. ಪೊಲೀಸರ ಪ್ರಕಾರ ರೋಹಿತ್ ಮುರ್ಮು ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ರೈಲ್ವೆ ಹಳಿ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬ. ಅಲ್ಲದೆ ಕಳೆದ ವರ್ಷ ಜಾರ್ಖಂಡ್‌ನಲ್ಲಿ ನಡೆದ ಇದೇ ರೀತಿಯ ಸ್ಫೋಟ ಪ್ರಕರಣದಲ್ಲಿಯೂ ಭಾಗಿಯಾಗಿದ್ದ.
ಆತನನ್ನು ಬಂಧಿಸಲು ಜಾರ್ಖಂಡ್ ಪೊಲೀಸ್ ತಂಡ ಇತ್ತೀಚೆಗೆ ಅಸ್ಸಾಂಗೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯ ಬಳಿಕ ಪೊಲೀಸರು ಎನ್‌ಕೌಂಟರ್ ನಡೆದ ಸ್ಥಳದಿಂದ 1 ಪಿಸ್ತೂಲ್, ಗ್ರೆನೇಡ್, ಮತದಾರರ ಗುರುತಿನ ಚೀಟಿ ಮತ್ತು ಜಾರ್ಖಂಡ್‌ನಲ್ಲಿ ನೀಡಲಾದ ಆಧಾರ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ.
