ಉದಯವಾಹಿನಿ, ಪ್ಯಾರಿಸ್: ಫ್ರಾನ್ಸ್‌ನ ಪುಯ್ ಡೆ ಲಾ ಟಾಚೆ ಪರ್ವತದ ತುದಿಯಲ್ಲಿ ಬೆಂಜಮಿನ್ ಬಿರುಗಾಳಿಯ ಬೀಸುವ ಸಮಯದಲ್ಲಿ ವ್ಯಕ್ತಿಯೊಬ್ಬರು ನೇರವಾಗಿ ನಿಲ್ಲಲು ಹೆಣಗಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಕೃತಿಯ ಭಯಾನಕ ಶಕ್ತಿಯನ್ನು ಅನಾವರಣಗೊಳಿಸಿದೆ. ಛಾಯಾಗ್ರಾಹಕ ಥಾಮಸ್ ಸೌಲೆಟ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ, ಮಧ್ಯ ಫ್ರಾನ್ಸ್‌ನಲ್ಲಿನ ತೀವ್ರ ಹವಾಮಾನವನ್ನು ಎದುರಿಸಿ ಚಂಡಮಾರುತದ ತೀವ್ರತೆಯನ್ನು ದಾಖಲಿಸಿದರು. ಬಿರುಗಾಳಿಯ ತೀವ್ರತೆಗೆ ನಿಲ್ಲಲೂ ಸಾಧ್ಯವಾಗದೆ ಕಷ್ಟಪಟ್ಟಿದ್ದಾರೆ.
ಸಾಹಸ ಛಾಯಾಗ್ರಾಹಕ ಎಂದು ಹೇಳಿಕೊಳ್ಳುವ ಸೌಲೆಟ್ ಈ ಬಗ್ಗೆ ಮಾಹಿತಿ ನೀಡಿ, ವಾಯುವ್ಯ ಮತ್ತು ಮಧ್ಯ ಫ್ರಾನ್ಸ್‌ನಲ್ಲಿ ಬೆಂಜಮಿನ್ ಬಿರುಗಾಳಿ ಅಪ್ಪಳಿಸಿದೆ. ಭಾರಿ ಗಾಳಿ ಮತ್ತು ವಿಪರೀತ ಮಳೆಯಿಂದ ತತ್ತರಿಸಿ 5,350 ಅಡಿ ಎತ್ತರದ (1,630 ಮೀಟರ್) ಶಿಖರವನ್ನು ಏರಿದ್ದೇನೆ. ಶಿಖರವನ್ನು ತಲುಪಿದ ತಕ್ಷಣ, ಚಂಡಮಾರುತದ ತೀವ್ರತೆಯು ಬಹುತೇಕ ಕೊಚ್ಚಿಕೊಂಡು ಹೋಯಿತು ಎಂದಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಸೌಲೆಟ್ ಕೆಳಕ್ಕೆ ಬಾಗಿ, ನೆಲವನ್ನು ಬಿಗಿಯಾಗಿ ಹಿಡಿದುಕೊಳ್ಳುವುದನ್ನು ಕಾಣಬಹುದು. ತೀವ್ರವಾದ ಗಾಳಿ ಅವನನ್ನು ಹಿಂದಕ್ಕೆ ತಳ್ಳುತ್ತಿದೆ. ಒಂದು ಹಂತದಲ್ಲಿ, ಗಾಳಿಯು ಪರ್ವತಶ್ರೇಣಿಯಾದ್ಯಂತ ಬೀಸುತ್ತಿದ್ದಂತೆ ಅವರು ಬಹುತೇಕ ಕುಸಿದು ಬೀಳುವಂತೆ ಕಂಡಿದ್ದಾರೆ. ಗಾಳಿಯ ವೇಗ ಗಂಟೆಗೆ 187 ಕಿ.ಮೀ (115 ಮೈಲು) ತಲುಪಿತ್ತು. ಇದು ವರ್ಗ 3ರ ಚಂಡಮಾರುತಕ್ಕೆ ಸಮಾನ.
ಬೆಂಜಮಿನ್ ಚಂಡಮಾರುತವು ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಅಪಾಯಕಾರಿ ಗಾಳಿ ಮತ್ತು ಧಾರಾಕಾರ ಮಳೆಯನ್ನು ಸುರಿಸಿದೆ. ಪರಿಣಾಮ ಸಾರಿಗೆ ಅಸ್ತವ್ಯಸ್ತಗೊಂಡಿದ್ದು, ವಿದ್ಯುತ್ ಕಡಿತಗೊಂಡಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಅನಗತ್ಯ ಪ್ರಯಾಣ ಮತ್ತು ಎತ್ತರದ ಪ್ರದೇಶಗಳಿಗೆ ತೆರಳದಂತೆ ನಾಗರಿಕರನ್ನು ಅಧಿಕಾರಿಗಳು ಒತ್ತಾಯಿಸಿದರು.
