ಉದಯವಾಹಿನಿ, ಕ್ಯಾಲಿಫೋರ್ನಿಯಾ: ಪೊಲೀಸ್ ಅಧಿಕಾರಿಯನ್ನು ಕೊಂದ ಆರೋಪಿಯು ಬೈಕ್ ಮೂಲಕ ಪಲಾಯನಗೈದಿದ್ದಾನೆ. ಆತನನ್ನು ಬೆನ್ನಟ್ಟಿದ್ದ ಅಧಿಕಾರಿಗಳು ಬೈಕ್‍ಗೆ ಕಾರು ಮೂಲಕ ಡಿಕ್ಕಿ ಹೊಡೆಸಿ, ಆತನನ್ನು ಕೆಡವಿದ್ದಾರೆ. ಮೈಜುಮ್ಮೆನ್ನಿಸುವ ಚೇಸಿಂಗ್ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮೆರಿಕ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ.
ಮಹಿಳೆಯೊಬ್ಬರಿಗೆ ಶಂಕಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕುತ್ತಿದ್ದಾನೆ ಎಂಬ ದೂರು ಕೇಳಿಬಂದಿದೆ. ಈ ವೇಳೆ ಪೊಲೀಸರು ಸ್ಥಳಕ್ಕಾಮಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಶಂಕಿತ ಅವರ ಮೇಲೆ ಫೈರಿಂಗ್ ಮಾಡಿದ್ದಾನೆ. ಪರಿಣಾಮ ಪೊಲೀಸ್ ಅಧಿಕಾರಿ ಗುಂಡೇಟಿಗೆ ಬಲಿಯಾಗಿದ್ದಾರೆ. ಅಧಿಕಾರಿಯನ್ನು ಕೊಂದ ಆರೋಪಿಯನ್ನು ಬಂಧಿಸಲು ಹೋದಾಗ ಆತ ತನ್ನ ಬೈಕ್‍ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತನನ್ನು ಬೆನ್ನಟ್ಟಿದ ಪೊಲೀಸರು ಬೈಕ್‍ಗೆ ತಮ್ಮ ಕಾರಿನ ಮೂಲಕ ಡಿಕ್ಕಿ ಹೊಡೆಸುವ ಮೂಲಕ ಆತನನ್ನು ಖೆಡ್ಡಾಗೆ ಕೆಡವಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಈ ದೃಶ್ಯ ಕಂಡುಬಂದಿದೆ.
ಹತ್ಯೆಯಾದ ಅಧಿಕಾರಿಯನ್ನು ಡೆಪ್ಯೂಟಿ ಆಂಡ್ರ್ಯೂ ನುನೆಜ್ ಎಂದು ಗುರುತಿಸಲಾಗಿದೆ. ಅವರು ಇಲಾಖೆಯಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವರದಿಯ ಪ್ರಕಾರ, ಅವರು ಎರಡು ವರ್ಷದ ಮಗಳು ಮತ್ತು ಗರ್ಭಿಣಿ ಹೆಂಡತಿಯನ್ನು ಅಗಲಿದ್ದಾರೆ. ನಾವು ದುಃಖದಲ್ಲಿ ಮುಳುಗಿದ್ದೇವೆ ಎಂದು ಪೊಲೀಸ್ ಅಧಿಕಾರಿ ಶಾನನ್ ಡಿಕಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
