ಉದಯವಾಹಿನಿ, ಮುಂಬೈ: ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಇತ್ತೀಚೆಗೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು 19 ಮಂದಿ ಸಜೀವ ದಹನವಾಗಿರುವ ಘಟನೆಯ ಆಘಾತದಿಂದ ದೇಶ ಇನ್ನೂ ಹೊರ ಬಿದ್ದಿಲ್ಲ. ಅದಾಗಲೇ ಮಹಾರಾಷ್ಟ್ರದಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದ್ದು, ಐಷಾರಾಮಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆಬಸ್‌ ಚಾಲಕನ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್‌ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿದ್ದಾನೆ. ಸಮೃದ್ಧಿ ಹೆದ್ದಾರಿಯಲ್ಲಿ ಅಕ್ಟೋಬರ್‌ 29ರ ಮುಂಜಾನೆ ಈ ಘಟನೆ ನಡೆದಿದೆ.
ಘಟನೆ ವೇಳೆ ಖಾಸಗಿ ಬಸ್‌ ಮುಂಬೈಯಿಂದ ಜಲ್ನಾಗೆ ತೆರಳುತ್ತಿತ್ತು. ಬಸ್‌ನಲ್ಲಿ 12 ಪ್ರಯಾಣಿಕರು, ಚಾಲಕ, ಆತನ ಸಹಾಯಕ ಸೇರಿ ಒಟ್ಟು 14 ಮಂದಿ ಇದ್ದರು. ಇದ್ದಕ್ಕಿದ್ದಂತೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್‌ ಅನ್ನು ರಸ್ತೆ ಬಳಿ ನಿಲ್ಲಿಸಿ ಪ್ರಯಾಣಿರನ್ನೆಲ್ಲ ಸುರಕ್ಷಿತವಾಗಿ ಕೆಳಗೆ ಇಳಿಸಿ, ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ʼʼರಾಷ್ಟ್ರೀಯ ಹೆದ್ದಾರಿ ನಾಗಪುರ ಲೇನ್‌ನಲ್ಲಿ ಮುಂಜಾನೆ ಸುಮಾರು 3 ಗಂಟೆಗೆ ಘಟನೆ ವರದಿಯಾಗಿದ್ದು, ಚಾಲಕ ಹುಸೇನ್‌ ಸಯ್ಯದ್ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ದುರಂತದಿಂದ ಪಾರಾಗಿದ್ದಾರೆʼʼ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬಸ್‌ನಲ್ಲಿ ಯಾವ ಕಾರಣಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!