
ಉದಯವಾಹಿನಿ : ಬಿಗ್‌ಬಾಸ್ ಮನೆಯಿಂದ ಸ್ಪರ್ಧಿ ಚಂದ್ರಪ್ರಭ ಈ ವಾರ ಎಲಿಮನೇಟ್ ಆಗಿ ಹೊರಬಂದಿದ್ದಾರೆ. ರಿಯಾಲಿಟಿ ಶೋ ಮೂಲಕ ಜನಪ್ರಿಯತೆಗಳಿಸಿದ್ದ ಕಾಮಿಡಿ ನಟ ಇದೀಗ ತೆರೆಯ ಹಿಂದಿನ ಸವಾಲನ್ನ ಹೇಳಿಕೊಂಡಿದ್ದಾರೆ. ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಬರುವುದಕ್ಕೂ ಕೆಲವು ದಿನಗಳ ಮೊದಲು ಜೀವನಕ್ಕಾಗಿ ನಾನು ಗಾರೆ ಕೆಲಸ ಮಾಡಿದ್ದೆ. ಬಿಗ್‌ಬಾಸ್‌ನಿಂದ ಕರೆ ಬಂದಾಗ ಕೆಲಸ ಬಿಟ್ಟು ಬಂದಿದ್ದೇನೆ ಎಂದು ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಚಂದ್ರಪ್ರಭ 10ನೇ ತರಗತಿ ಓದಿ ಬಳಿಕ ಗಾರೆ ಕೆಲಸವನ್ನೇ ವೃತ್ತಿ ಮಾಡಿಕೊಂಡಿದ್ದವರು. ಬಳಿಕ ರಂಗಭೂಮಿ ನಂಟು ಬೆಳೆಸಿಕೊಂಡು ರಂಗಾಯಣದಲ್ಲಿ ತರಬೇತಿ ಪಡೆದು ಮಜಾಭಾರತ ಕಾಮಿಡಿ ಶೋ ಮೂಲಕ ಹೆಸರು ಪಡೆಯುತ್ತಾರೆ.
ವಿಭಿನ್ನ ಮ್ಯಾನರಿಸಂ ಮೂಲಕ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದರೂ ಕೆಲಸ ಇಲ್ಲದೇ ಇರುವಾಗ ಈಗಲೂ ಗಾರೆ ಕೆಲಸ ಮಾಡುತ್ತೇನೆ. ಕೆಲಸ ಯಾವುದಾದರೇನು? ಕೂತು ತಿನ್ನುವ ಬದಲು ದುಡಿದು ತಿನ್ನಬೇಕು ಎಂಬ ಸಿದ್ಧಾಂತದಿಂದ ಜನಪ್ರಿಯತೆ ಗಳಿಸಿದ ಮೇಲೂ ಗಾರೆ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಗುರುತು ಮೆರೆಮಾಚಿಕೊಂಡು ಗೊತ್ತಿರುವ ಕಲೆ ಗಾರೆ ಕೆಲಸವನ್ನ ಮಾಡಿರುವ ವಿಷಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ನನ್ನ ತಂದೆ ಗಾರೆ ಕೆಲಸ ಮಾಡುತ್ತಿದ್ದರು. ಮನೆಗೆ ಹಿರಿಮಗನಾಗಿದ್ದ ನಾನು ಅದೇ ಕೆಲಸವನ್ನು ಮುಂದುವರೆಸಿದೆ. ಈಗ ಕಾರು ಮನೆ ಎಲ್ಲವೂ ಇದ್ದರೂ ಕೆಲಸ ಇಲ್ಲದೇ ಇದ್ದಾಗ ಗೊತ್ತಿರುವ ಕೆಲಸ ಮಾಡುತ್ತಿರುತ್ತೇನೆ. ಪ್ರತಿ ಕಾಮಿಡಿಯನ್ ಹಿಂದೆ ಕಾಣದ ಕಷ್ಟ ಇರುತ್ತೆ. ಆತ ಎಷ್ಟು ನಗಿಸುತ್ತಾನೋ ಅಷ್ಟೇ ಅಳಬಲ್ಲ ಎಂದು ಭಾವುಕವಾಗಿ ಚಂದ್ರಪ್ರಭ ಮಾತನಾಡಿದರು.
