ಉದಯವಾಹಿನಿ, ಗುವಾಹಟಿ: ಕೋಲ್ಕತ್ತಾ ಟೆಸ್ಟ್ ಸೋಲಿನ ನಂತರ, ಗೌತಮ್ ಗಂಭೀರ್ ನೇತೃತ್ವದ ಭಾರತೀಯ ತಂಡದ ಆಡಳಿತ ಮಂಡಳಿಯು ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ಯಾವ ರೀತಿಯ ಪಿಚ್ ಬೇಕು ಎಂಬುದರ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ. ಶನಿವಾರ (ನವೆಂಬರ್ 22) ಪ್ರಾರಂಭವಾಗಲಿರುವ ಪಂದ್ಯದಲ್ಲಿ ಕೆಂಪು ಮಣ್ಣಿನ ಪಿಚ್ ಅನ್ನು ಸಿದ್ಧಪಡಿಸಲು ಸಜ್ಜಾಗಿದೆ.
ವರದಿಯ ಪ್ರಕಾರ, ಸರಣಿಯ ಆರಂಭಿಕ ಪಂದ್ಯಕ್ಕಾಗಿ ಈಡನ್ ಗಾರ್ಡನ್ಸ್‌ನಲ್ಲಿ ಮಾಡಲಾಗಿದ್ದ ಪಿಚ್‌ಗಿಂತ ಸಂಪೂರ್ಣವಾಗಿ ಈ ಪಿಚ್ ಭಿನ್ನವಾಗಿರಲಿದ್ದು ವೇಗಿಗಳಿಗೆ ನೆರವಾಗುವ ಉತ್ತಮ ಬೌನ್ಸ್ ಮತ್ತು ಕ್ಯಾರಿ ನಿರೀಕ್ಷಿಸಲಾಗಿದೆ. ಪಿಚ್ ತಿರುವು ಪಡೆಯುವ ನಿರೀಕ್ಷೆಯಿಲ್ಲ.
ಪಿಚ್ ಕೆಂಪು ಮಣ್ಣಿನಿಂದ ಮಾಡಲ್ಪಟ್ಟಿದೆ, ಇದು ಹೆಚ್ಚು ವೇಗ ಮತ್ತು ಬೌನ್ಸ್ ನೀಡುವ ಪ್ರವೃತ್ತಿಯನ್ನು ಹೊಂದಿದೆ. ತವರು ಋತುವಿಗೆ ಮುಂಚಿತವಾಗಿಯೇ ಭಾರತ ತಂಡವು ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿತ್ತು. ಗಣನೀಯವಾಗಿ ಬದಲಾಗುವ ಬೌನ್ಸ್ ಆಗದಂತೆ ಖಚಿತಪಡಿಸಿಕೊಳ್ಳಲು ಕ್ಯುರೇಟರ್‌ಗಳು ಪ್ರಯತ್ನಿಸುತ್ತಿದ್ದಾರೆ” ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದೆ. ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಪಂದ್ಯವನ್ನು ಗೆದ್ದು 25 ವರ್ಷಗಳ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಸರಣಿ ಗೆಲುವು ಸಾಧಿಸುವ ಇರಾದೆಯಲ್ಲಿದೆ. ಗೆಲುವು ಸಾಧ್ಯವಾಗದಿದ್ದರೆ ಕನಿಷ್ಠ ಡ್ರಾ ಮಾಡಿಕೊಂಡರೂ ಸರಣಿ ಹರಿಣಗಳ ಪಾಲಾಗಲಿದೆ.
