ಉದಯವಾಹಿನಿ, ಲಿಮಾ: ಚಿಲಿ ದೇಶದಿಂದ ವಲಸಿಗರ ಆಗಮನ ಉಲ್ಬಣಗೊಳ್ಳುವ ನಿರೀಕ್ಷೆಯಿಂದಾಗಿ ಚಿಲಿಯೊಂದಿಗಿನ ಪಶ್ಚಿಮ ಗಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವುದಾಗಿ ಪೆರು ಸರಕಾರ ಹೇಳಿದೆ.
ಚಿಲಿಯಲ್ಲಿ ವಲಸಿಗರು ಆಶ್ರಯ ಪಡೆಯುವುದನ್ನು ಕಟುವಾಗಿ ವಿರೋಧಿಸುವ ಕಟ್ಟಾ ಬಲಪಂಥೀಯ ಅಭ್ಯರ್ಥಿ ಜೋಸ್ ಅಂಟೋನಿಯೊ ಕಾಸ್ಟ್ ಡಿಸೆಂಬರ್ 14ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಪಡೆಯುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಪೆರು ಸರಕಾರ ಈ ನಿರ್ಧಾರಕ್ಕೆ ಬಂದಿದೆ.
ದಕ್ಷಿಣದ ಟಾಕ್ನಾ ವಲಯದಲ್ಲಿ ಮುಂದಿನ 60 ದಿನಗಳವರೆಗೆ ತುರ್ತು ಪರಿಸ್ಥಿತಿ ಘೋಷಿಸಿದ್ದು ಗಡಿ ನಿಯಂತ್ರಣದ ಹೊಣೆಯನ್ನು ಮಿಲಿಟರಿಗೆ ವಹಿಸಲಾಗಿದೆ. ಗಡಿ ಪ್ರದೇಶದಲ್ಲಿ ಅಪರಾಧ ಕೃತ್ಯ ಹಾಗೂ ಹಿಂಸಾಚಾರವನ್ನು ನಿಯಂತ್ರಿಸುವುದೂ ಇದರ ಉದ್ದೇಶವಾಗಿದೆ ಎಂದು ಪೆರು ಸರಕಾರದ ಮೂಲಗಳು ಹೇಳಿವೆ.
ದಕ್ಷಿಣ ಪೆರುವಿನ ಚಕಲುಟ-ಸಾಂತಾ ರೋಸ ಗಡಿದಾಟುವಿನ ಬಳಿ ಹಲವಾರು ವಲಸಿಗರು ಚಿಲಿಯಿಂದ ಪೆರು ದೇಶದೊಳಗೆ ಪ್ರವೇಶಿಸಲು ಗುಂಪು ಸೇರಿರುವ ವೀಡಿಯೊವನ್ನು ಚಿಲಿಯ ಗವರ್ನರ್ ಪ್ರಸಾರ ಮಾಡಿದ ಬೆನ್ನಲ್ಲೇ ಪೆರು ದೇಶ ಈ ಕ್ರಮ ಕೈಗೊಂಡಿದೆ.

Leave a Reply

Your email address will not be published. Required fields are marked *

error: Content is protected !!