ಉದಯವಾಹಿನಿ , ಲಾಹೋರ್: ಪಾಕಿಸ್ತಾನದ ಬಹಾವಲ್ಪುರದಲ್ಲಿ ಜೈಶ್, ಲಷ್ಕರ್ ಭಯೋತ್ಪಾದಕರು ಸಭೆ ನಡೆಸಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಲಷ್ಕರ್-ಎ-ತೈಬಾ ಮತ್ತು ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ 15 ಜನರ ಸಾವಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಎಂಬ ಎರಡು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳ ಉಗ್ರರ ಸಭೆ ಇದಾಗಿದ್ದು, ಫೋಟೊ ವೈರಲ್ ಆಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಆಪರೇಷನ್ ಸಿಂದೂರ್ ಮೂಲಕ ನೀಡಿದ ಸಶಸ್ತ್ರ ಪ್ರತಿಕ್ರಿಯೆ ವೇಳೆ ದಾಳಿಗೊಳಗಾದ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆಯಿತು. ಎಲ್‌ಇಟಿ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಜೈಶ್ ಕಮಾಂಡರ್‌ಗಳೊಂದಿಗೆ ಕಾಣಿಸಿಕೊಂಡಿದ್ದಾನೆ.
ಪಾಕಿಸ್ತಾನ ಅತ್ಯಂತ ಮಾರಕ ಭಯೋತ್ಪಾದಕ ಸಂಘಟನೆ ಎನಿಸಿಕೊಂಡಿರುವ ಎಲ್‌ಇಟಿ ಮತ್ತು ಜೆಇಎಂ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ಎಚ್ಚರಿಕೆಗೆ ಈ ಫೋಟೊ ಸಾಕ್ಷಿ ಎನಿಸಿಕೊಂಡಿದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್‌ನಲ್ಲಿ ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ಪುನರ್‌ನಿರ್ಮಿಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಇದು ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಪಡೆಗಳು ಗುರಿಯಾಗಿಸಿಕೊಂಡ ಮತ್ತೊಂದು ಭಯೋತ್ಪಾದಕ ತಾಣ.
ದೆಹಲಿಯ ಕೆಂಪು ಕೋಟೆಯ ಕಾರು ಬಾಂಬ್ ದಾಳಿಯ ನಂತರ ಜೈಶ್-ಎ-ಮೊಹಮ್ಮದ್ ಹೊಸ ದಾಳಿ ನಡೆಸಲು ಮತ್ತೊಂದು ಫಿದಾಯೀನ್ ಅಥವಾ ಆತ್ಮಹತ್ಯಾ ದಾಳಿ ತಂಡವನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಹಣವನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿತ್ತು.
