ಉದಯವಾಹಿನಿ , ಕೀವ್​(ಉಕ್ರೇನ್): ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿ, ಶಾಂತಿ ಪ್ರಸ್ತಾವನೆಯನ್ನು ಎರಡು ರಾಷ್ಟ್ರಗಳಿಗೆ ನೀಡಿದೆ. ಆದರೆ, ಈ ಶಾಂತಿ ಪ್ರಸ್ತಾವಕ್ಕೆ ಸಹಿ ಹಾಕಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಿದ್ಧರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಮೆರಿಕ ಆಡಳಿತದ ಶಾಂತಿ ಪ್ರಸ್ತಾವನೆಯನ್ನು ಮಾರ್ಪಡಿಸುವಂತೆ ಈ ಹಿಂದೆಯೂ ಕೂಡ ಉಕ್ರೇನ್​ ಒತ್ತಾಯಿಸಿತ್ತು. ಹಾಗಾಗಿ ತಿದ್ದುಪಡಿಯ ಬಳಿಕ ಪ್ರಸ್ತಾವನೆಯ ಮೇಲಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕ ಮತ್ತು ಉಕ್ರೇನ್ ಸಮಾಲೋಚಕರು ಮೂರು ದಿನಗಳ ಮಾತುಕತೆ ನಡೆಸಿದ ನಂತರವೂ ಝೆಲೆನ್ಸ್ಕಿ ಒಪ್ಪಿಗೆ ನೀಡಿಲ್ಲ. ಈ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್​, ಉಕ್ರೇನ್ ನಾಯಕ ಮಾತುಕತೆಗಳು ಮುಂದುವರಿಯುವುದನ್ನು ತಡೆಹಿಡಿಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.ಝೆಲೆನ್ಸ್ಕಿ ಪ್ರಸ್ತಾವನೆಯನ್ನು ಇನ್ನೂ ಓದಿಲ್ಲ ಎಂಬುದು ನನಗೆ ನಿರಾಶೆಯಾಗುತ್ತಿದೆ. ಈ ಪ್ರಸ್ತಾವನೆಯನ್ನು ಅವರ ಜನರು ಮೆಚ್ಚಿದ್ದಾರೆ. ಆದರೆ, ಅವರು ಓದಿಲ್ಲ. ರಷ್ಯಾ ಪ್ರಸ್ತಾವನೆಗೆ ಒಪ್ಪಿದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.ಆದರೆ, ಈ ಪ್ರಸ್ತಾವಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಕೂಡ ಸಾರ್ವಜನಿಕವಾಗಿ ಅನುಮೋದನೆ ನೀಡಿಲ್ಲ. ಪ್ರಸ್ತಾವನೆಯ ಅಂಶಗಳು ರಷ್ಯಾ ಪರವಾಗಿದ್ದು, ಕಳೆದ ವಾರ ಪುಟಿನ್, ಟ್ರಂಪ್ ಅವರ ಪ್ರಸ್ತಾವನೆಯ ಅಂಶಗಳು ಕಾರ್ಯಸಾಧ್ಯವಲ್ಲ ಎಂದಿದ್ದರು.ಫ್ಲೋರಿಡಾದಲ್ಲಿ ಉಕ್ರೇನಿಯನ್ ನಿಯೋಗದೊಂದಿಗೆ ಅಮೆರಿಕದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಝೆಲೆನ್ಸ್ಕಿ ಅವರಿಗೆ ಫೋನ್​ ಕರೆ ಮೂಲಕ ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಝೆಲೆನ್ಸ್ಕಿ, ಉಕ್ರೇನ್ ಶಾಂತಿ ಸಾಧಿಸಲು ಅಮೆರಿಕದೊಂದಿಗೆ ದೃಢನಿಶ್ಚಯ ಹೊಂದಿದೆ ಎಂದು ತಿಳಿಸಿದ್ದಾರೆ.ಶಾಂತಿ ಸಂಧಾನಕ್ಕೆ 28 ಅಂಶಗಳ ಪ್ರಸ್ತಾವನೆ: ಶಾಂತಿ ಸಂಧಾನಕ್ಕೆ ಅಮೆರಿಕ ಪ್ರಸ್ತಾಪಿಸಿದ 28 ಅಂಶಗಳ ಯೋಜನೆಯನ್ನು ಈ ಹಿಂದಿನ ಸುತ್ತಿನ ಮಾತುಕತೆಯಲ್ಲಿ ಉಕ್ರೇನ್​ ತಿರಸ್ಕರಿಸಿತ್ತು. ಉಕ್ರೇನ್ ತನ್ನ ಸಶಸ್ತ್ರ ಪಡೆಗಳ ಗಾತ್ರದ ಮೇಲಿನ ಮಿತಿಗಳನ್ನು ಒಪ್ಪಿಕೊಳ್ಳಲು, ನ್ಯಾಟೋಗೆ ಸೇರುವ ಪ್ರಯತ್ನವನ್ನು ಕೈಬಿಡುವ ಮತ್ತು ಕೆಲವು ಪ್ರದೇಶಗಳನ್ನು ರಷ್ಯಾಗೆ ಬಿಟ್ಟುಕೊಡುವ ಪ್ರಮುಖ ಅಂಶಗಳನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು. ಹಾಗೆಯೇ ರಷ್ಯಾದ ದೀರ್ಘಕಾಲದ ಬೇಡಿಕೆಗೆ ಅನುಗುಣವಾಗುವಂತೆ ವ್ಲಾಡಿಮಿರ್ ಪುಟಿನ್ ಗರಿಷ್ಠ ರಿಯಾಯಿತಿಗಳನ್ನು ಪಡೆಯಲು ಪ್ರಯತ್ನಿಸಿರುವುದಾಗಿ ಆರೋಪಿಸಿತ್ತು.

Leave a Reply

Your email address will not be published. Required fields are marked *

error: Content is protected !!