
ಉದಯವಾಹಿನಿ, ಬೀಜಿಂಗ್: ಲಂಚ ಪಡೆದ ಆರೋಪದ ಮೇಲೆ ಚೀನಾ ಮಾಜಿ ಜನರಲ್ ಮ್ಯಾನೇಜರ್ ಬಾಯಿ ಟಿಯಾನ್ಹುಯಿ ಎಂಬಾತನನ್ನು ಗಲ್ಲಿಗೇರಿಸಿದೆ. ಸುಪ್ರೀಂ ಪೀಪಲ್ಸ್ ಕೋರ್ಟ್ ಅನುಮೋದಿಸಿದ ನಂತರ ಉತ್ತರ ಚೀನಾದ ಟಿಯಾಂಜಿನ್ ಪುರಸಭೆಯ ನ್ಯಾಯಾಲಯವು ಮರಣದಂಡನೆ ಜಾರಿಗೊಳಿಸಿದೆ. ಟಿಯಾನ್ಹುಯಿ ಆಸ್ತಿ ನಿರ್ವಹಣಾ ಸಂಸ್ಥೆ ಚೀನಾ ಹುವಾರೊಂಗ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್‌ನ ಮಾಜಿ ಜನರಲ್ ಮ್ಯಾನೇಜರ್ ಆಗಿದ್ದ. 1.1 ಬಿಲಿಯನ್ ಯುವಾನ್ ($155 ಮಿಲಿಯನ್) ಗಿಂತ ಹೆಚ್ಚು ಲಂಚ ಪಡೆದ ಆರೋಪದಲ್ಲಿ ತಪ್ಪಿತಸ್ಥನೆಂದು ವರದಿಯಾಗಿದೆ.
ಟಿಯಾಂಜಿನ್ ಎರಡನೇ ಮಧ್ಯಂತರ ಪೀಪಲ್ಸ್ ನ್ಯಾಯಾಲಯವು 2024ರ ಮೇ 28 ರಂದು ಲಂಚ ಸ್ವೀಕರಿಸಿದ್ದಕ್ಕಾಗಿ ಟಿಯಾನ್ಹುಯಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಶಿಕ್ಷೆ ವಿಧಿಸಿದ ನಂತರ ಆತನ ವೈಯಕ್ತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ಬಾಯಿ ಟಿಯಾನ್ಹುಯಿ ಪಡೆದ ಲಂಚದ ಮೊತ್ತವು ತುಂಬಾ ದೊಡ್ಡದಾಗಿದೆ. ಅಪರಾಧ ಗಂಭೀರವಾಗಿತ್ತು. ಸಾಮಾಜಿಕ ಪರಿಣಾಮವು ತೀವ್ರವಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಆತನ ಅಪರಾಧವು ರಾಜ್ಯದ ಹಿತಾಸಕ್ತಿಗಳಿಗೆ ಹಾಗೂ ಚೀನಾದ ಜನರಿಗೆ ಹಾನಿ ಮಾಡಿದೆ. ಕಾನೂನಿನ ಪ್ರಕಾರ ಅವನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕೋರ್ಟ್ ತಿಳಿಸಿತ್ತು. ಟಿಯಾನ್ಹುಯಿ ನಡೆಸುತ್ತಿದ್ದ ಆಫ್‌ಶೋರ್ ಘಟಕವನ್ನು ಕಳೆದ ವರ್ಷ ಸಿಟಿಕ್ ಗ್ರೂಪ್ ಸ್ವಾಧೀನಪಡಿಸಿಕೊಂಡಿತು. ನಂತರ ಚೀನಾ ಸಿಟಿಕ್ ಫೈನಾನ್ಷಿಯಲ್ ಅಸೆಟ್ ಮ್ಯಾನೇಜ್‌ಮೆಂಟ್ ಎಂದು ಮರುನಾಮಕರಣ ಮಾಡಿತು.
