ಉದಯವಾಹಿನಿ, ಗಾಂಧಿನಗರ : ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಆದರೆ ಮಾನವರು ಪ್ರಾಣಿಗಳನ್ನು ಸ್ವಾರ್ಥಕ್ಕಾಗಿ ಕೊಲ್ಲುತ್ತಿದ್ದಾರೆ. ಆದರೆ ಕೆಲವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಪ್ರಾಣಿ-ಪಕ್ಷಿಗಳನ್ನು ರಕ್ಷಿಸುತ್ತಾರೆ. ಇದೀಗ ಇಂಥಹದ್ದೇ ಒಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ಅರಣ್ಯ ಇಲಾಖೆ ಮತ್ತು ದೇಡಿಯಾಪದಾ ಮೂಲದ ಜೀವದಯಾ ಪ್ರೇಮಿ ಎಂಬ ಸಂಘಟನೆಯ ಪ್ರಾಣಿ ಕಲ್ಯಾಣ ಕಾರ್ಯಕರ್ತರ ಜಂಟಿ ಪ್ರಯತ್ನದಲ್ಲಿ ಹೆಬ್ಬಾವನ್ನು ರಕ್ಷಿಸಲಾಗಿದೆ. ಗುಜರಾತ್‍ನ ನರ್ಮದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ವರದಿಯಾಗಿದೆ. ಇದರ ವಿಡಿಯೊ ವೈರಲ್ ಆಗಿದೆ.

ತಲೆಗೆ ಗಾಯಗೊಂಡ ಹೆಬ್ಬಾವು ಪ್ರಜ್ಞೆ ತಪ್ಪಿ ಬಿದ್ದಿತ್ತು. ಇದನ್ನು ಗಮನಿಸಿದ ಪ್ರಾಣಿ ಕಲ್ಯಾಣ ಕಾರ್ಯಕರ್ತ ಭವಿನ್‌ಭಾಯ್ ವಾಸವ, ಸಿಪಿಆರ್ ಮಾಡುವ ಮೂಲಕ ಅದರ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದರು. ವಿಡಿಯೊದಲ್ಲಿ ವಾಸವ ದೈತ್ಯ ಹಾವಿನ ಬಾಯಿಗೆ ಸಣ್ಣ, ಟೊಳ್ಳಾದ ರಾಡ್ ಅನ್ನು ಸೇರಿಸುವುದನ್ನು ಮತ್ತು ಅದರ ಮೂಲಕ ಸಿಪಿಆರ್ ಅನ್ನು ನೀಡುವುದನ್ನು ಕಾಣಬಹುದು. ನಂತರ ಅರಣ್ಯ ಇಲಾಖೆಯ ತಂಡ ಮತ್ತು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. ಈ ತಿಂಗಳು ಗುಜರಾತ್‌ನಲ್ಲಿ ವರದಿಯಾದ ಇಂತಹ ಎರಡನೇ ಘಟನೆ ಇದು. ಇದಕ್ಕೂ ಮೊದಲು, ವಲ್ಸಾದ್‍ನಲ್ಲಿ ವನ್ಯಜೀವಿ ರಕ್ಷಕರೊಬ್ಬರು ವಿದ್ಯುತ್ ಆಘಾತಕ್ಕೊಳಗಾಗಿದ್ದ ಹಾವಿಗೆ ಬಾಯಿಯ ಮೂಲಕ ಸಿಪಿಆರ್ ನೀಡಿ ಬದುಕಿಸಿದ್ದರು. ಈ ಮೂಲಕ ಹಾವಿಗೆ ಪುನರುಜ್ಜೀವನ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!