ಉದಯವಾಹಿನಿ , ಮುಂಬೈ: ಹೊಸ ವರ್ಷ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮಹಾರಾಷ್ಟ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಸವಾರರಿಗೆ ಬಂಪರ್ ಗಿಫ್ಟ್ ಕೊಡೋದಕ್ಕೆ ಮುಂದಾಗಿದೆ. ಗ್ರೀನ್ ಎನರ್ಜಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಟೋಲ್ ವಿನಾಯಿತಿ ನೀಡುವುದಕ್ಕೆ ಮುಂದಾಗಿದೆ.
ನಾಗ್ಪುರದಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ರಾಹುಲ್ ನರವೇಕರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ನಿರ್ವಹಣೆ ಮಾಡುತ್ತಿರುವ ಟೋಲ್‌ಗಳಲ್ಲಿ ಮುಂದಿನ 8 ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಟೋಲ್ ವಿನಾಯಿತಿ ಕ್ರಮವನ್ನ ಜಾರಿಗೆ ತರಬೇಕೆಂದು ನಿರ್ದೇಶನ ನೀಡಿದ್ದಾರೆ. ಅಲ್ಲದೇ ಟೋಲ್ ವಿನಾಯಿತಿ ಜೊತೆಗೆ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳ ವಿಸ್ತರಣೆಯನ್ನೂ ವೇಗಗೊಳಿಸುವಂತೆ ಸ್ಪೀಕರ್ ನರವೇಕರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಟೋಲ್ ಪ್ಲಾಜಾಗಳಲ್ಲಿ ವ್ಯವಸ್ಥೆಯನ್ನ ನವೀಕರಿಸಿ ಪ್ರತಿ ನೋಂದಾಯಿತ ವಿದ್ಯುತ್ ಚಾಲಿತ ವಾಹನಗಳನ್ನ ಸೂಕ್ತವಾಗಿ ಖಚಿತಪಡಿಸಿಕೊಳ್ಳುವಂತೆ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ಎಲೆಕ್ಟ್ರಿಕ್ ವಾಹನಗಳಿಗೆ ಟೋಲ್ ವಿನಾಯಿತಿ ನೀಡುವ ಕ್ರಮ ಜಾರಿಗೆ ತಕ್ಷಣವೇ ಕರೆ ನೀಡಬೇಕು. ಜೊತೆಗೆ ವಿದ್ಯುತ್ ವಾಹನ ಬಳಕೆದಾರರಿಂದ ಕಾನೂನು ಬಾಹಿರವಾಗಿ ಈವರೆಗೆ ಸಂಗ್ರಹಿಸಲಾದ ಟೋಲ್ ಮೊತ್ತವನ್ನ ಮರುಪಾವತಿಸಲು ಸರಿಯಾದ ಕಾರ್ಯವಿಧಾನ ಅನುಷ್ಠಾನಗೊಳಿಸಬೇಕು. ಏಕೆಂದರೆ ನೀತಿ ಜಾರಿಗೆ ಬಂದ ಬಳಿಕವೂ ಟೋಲ್ ಸಂಗ್ರಹ ಮಾಡುತ್ತಿರುವುದು ಕಾನೂನು ಬಾಹಿರ. ಈ ಕ್ರಮವನ್ನ ವಿಳಂಬವಿಲ್ಲದೇ ಹಾಗೂ ಲೋಪಗಳೂ ಇಲ್ಲದಂತೆ ಅನುಷ್ಠಾನಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.
