ಉದಯವಾಹಿನಿ , ಇಸ್ಲಾಮಾಬಾದ್ : ದಕ್ಷಿಣ ಏಶ್ಯಾದ ಭೌಗೋಳಿಕ ರಾಜಕೀಯದಲ್ಲಿ ಭಾರತದ ದೀರ್ಘಕಾಲದ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿಟ್ಟಿನಲ್ಲಿ ಭಾರತವನ್ನು ಹೊರಗಿರಿಸಿ ಹೊಸ ದಕ್ಷಿಣ ಏಶ್ಯಾ ಬಣವನ್ನು ಸ್ಥಾಪಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿರುವುದಾಗಿ
ರಾಜಕೀಯ ವಿಶ್ಲೇಷಕರನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ಪಾಕಿಸ್ತಾನವು ಬಾಂಗ್ಲಾದೇಶ ಮತ್ತು ಚೀನಾದೊಂದಿಗಿನ ತನ್ನ ತ್ರಿಪಕ್ಷೀಯ ಉಪಕ್ರಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ಇತರ ಪ್ರಾದೇಶಿಕ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಇತ್ತೀಚೆಗೆ ಹೇಳಿದ್ದಾರೆ. ಆದರೆ ಭಾರತದ ಆರ್ಥಿಕತೆ ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿನ ಸಾಧನೆಯನ್ನು ಗಮನಿಸಿದರೆ ಭಾರತ ಇಲ್ಲದ ಪ್ರಾದೇಶಿಕ ಗುಂಪನ್ನು ಸೇರಿಕೊಳ್ಳುವ ಅಪಾಯಕ್ಕೆ ಯಾವುದೇ ದೇಶ ಮುಂದಾಗದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ದೀರ್ಘಕಾಲದಿಂದ ನಿಷ್ಕ್ರಿಯವಾಗಿರುವ `ದಕ್ಷಿಣ ಏಶ್ಯಾ ಪ್ರಾದೇಶಿಕ ಸಹಕಾರ ಸಂಘದ(ಸಾರ್ಕ್) ಸ್ಥಾನದಲ್ಲಿ ಹೊಸ ಪ್ರಾದೇಶಿಕ ಒಕ್ಕೂಟವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಇಶಾಕ್ ದಾರ್ ಕಳೆದ ವಾರ ಮುಂದಿರಿಸಿದ್ದರು. ದಕ್ಷಿಣ ಏಶ್ಯಾವು ಇನ್ನು ಮುಂದೆ `ಶೂನ್ಯ ಮೊತ್ತದ ಮನಸ್ಥಿತಿಗಳು, ರಾಜಕೀಯ ವಿಘಟನೆ ಮತ್ತು ನಿಷ್ಕ್ರಿಯ ಪ್ರಾದೇಶಿಕ ವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಸಾಧ್ಯವಿಲ್ಲ. ನಾವು ಮುಕ್ತ ಮತ್ತು ಅಂತರ್ಗತ ಪ್ರಾದೇಶಿಕತೆಯನ್ನು ಬಯಸುತ್ತೇವೆ’ ಎಂದು ದಾರ್ ಪ್ರತಿಪಾದಿಸಿದ್ದರು.
