ಉದಯವಾಹಿನಿ , ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಆಗಸ್ಟ್ 5 ರಂದು ಅಮೆರಿಕದ ಕನೆಕ್ಟಿಕಟ್ ರಾಜ್ಯದ ಗ್ರೀನ್‌ವಿಚ್ ನಗರದಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಹಾಗೂ ಆಕೆಯ ಮಗನ ಆತ್ಮಹತ್ಯೆಯಿಂದ ಸ್ಯಾಮ್ ಆಲ್ಬಮನ್ ಅವರ ಒಪನ್‌ಎಐ ಕಂಪನಿ ಇದೀಗ ತೊಂದರೆಗೆ ಸಿಲುಕಿದೆ.
ಗ್ರೀನ್‌ವಿಚ್ ಬಳಿಯ ಅಡಮ್ ಎಸ್ಟೇಟ್‌ನ ‘ಸುಜಾನೆ ಎಬ್ಬರ್‌ಸನ್ ಅಡಮ್ಸ್’ ಎಂಬ 83 ವರ್ಷದ ಮಹಿಳೆಯನ್ನು ಆಕೆಯ ಸ್ವಂತ ಮಗ 56 ವರ್ಷದ ‘ಸ್ಟಿನ್ ಎರಿಕ್ ಸೊಯೋಲ್‌ಬರ್ಗ್’ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಂದು ಬಾವಿಗೆ ಎಸೆದಿದ್ದ. ಬಳಿಕ ತಾನೂ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಪೊಲೀಸರು ಆರಂಭದಲ್ಲಿ ತನಿಖೆ ನಡೆಸುವಾಗ ಇದೊಂದು ಕೊಲೆ ಹಾಗೂ ಆತ್ಮಹತ್ಯೆ ಎಂದು ಪ್ರಾಥಮಿಕ ವರದಿಗಳಲ್ಲಿ ಹೇಳಿದ್ದರು.
ಆದರೆ, ಸುಜಾನೆ ಉತ್ತರಾಧಿಕಾರಿಗಳು ಇದೀಗ ಒಪನ್‌ಎಐ ಕಂಪನಿಯ ಚಾಟ್‌ಜಿಪಿಟಿ ವಿರುದ್ಧ ಕ್ಯಾಲಿಪೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೊ ನಗರದ ಉನ್ನತ ನ್ಯಾಯಾಲಯಕ್ಕೆ ನ್ಯಾಯ ಕೋರಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಸುಜಾನೆ ಕೊಲೆ ಹಾಗೂ ಆಕೆಯ ಮಗನ ಆತ್ಮಹತ್ಯೆ ಸಾಮಾನ್ಯ ಪ್ರಕರಣವಾಗಿ ಅವರ ಕುಟುಂಬದವರಿಗೆ ಕಾಣಲಿಲ್ಲ ಎಂದು ತಿಳಿದು ಬಂದಿದೆ.
