ಉದಯವಾಹಿನಿ , ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ರಿಲೀಸ್‌ಗೆ ಕ್ಷಣಗಣನೆಯಷ್ಟೇ ಬಾಕಿಯಿದೆ. ಡೆವಿಲ್ ಬರಮಾಡಿಕೊಳ್ಳಲು 300ಕ್ಕೂ ಹೆಚ್ಚು ಚಿತ್ರಮಂದಿರಗಳು ಈಗಾಗಲೇ ಸಿಂಗಾರಗೊಂಡಿವೆ. ಟ್ರೈಲರ್ ಮತ್ತು ಹಾಡುಗಳಿಂದ ನಿರೀಕ್ಷೆ ಮೂಡಿರುವ ಸಿನಿಮಾ ಗುರುವಾರ ಬೆಳಗ್ಗೆಯಿಂದಲೇ ಪ್ರದರ್ಶನ ಆರಂಭಿಸುತ್ತಿದೆ. ಜೈಲಿನಲ್ಲಿದ್ದುಕೊಂಡೇ ಅಭಿಮಾನಿಗಳಿಗೆ ಪತ್ರ ಬರೆದಿರುವ ದರ್ಶನ್, ಸಿನಿಮಾ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ಹೌದು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅನುಪಸ್ಥಿತಿಯಲ್ಲಿ ‘ದಿ ಡೆವಿಲ್’ ಬಿಡುಗಡೆಯಾಗುತ್ತಿದೆ. ‘ದಿ ಡೆವಿಲ್’ ರಿಲೀಸ್‌ಗೂ ಮುನ್ನ ಅಭಿಮಾನಿಗಳಿಗೆ ದರ್ಶನ್ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ಅಭಿಮಾನಿಗಳಿಗೆ ದರ್ಶನ್ ಬರೆದಿರುವ ಬಹಿರಂಗ ಪತ್ರವನ್ನ ಪತ್ನಿ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಹೃದಯಾಳದ ಈ ಸಂದೇಶವನ್ನು ನಿಮ್ಮ ಪ್ರತಿಯೊಬ್ಬರಿಗೂ ವಿಜಿ ತಲುಪಿಸುತ್ತಿದ್ದಾಳೆ. ನಿಮ್ಮ ಪ್ರತಿಯೊಬ್ಬರ ಬಗ್ಗೆ.. ನಿಮ್ಮ ಪ್ರೀತಿ, ನಿಮ್ಮ ಕಾಳಜಿ, ನಿಮ್ಮ ಬೆಂಬಲ, ರಾಜ್ಯದಾದ್ಯಂತ ಮಾಡುತ್ತಿರುವ ಸಿನಿಮಾ ಪ್ರಚಾರ.. ಇವೆಲ್ಲವನ್ನು ನನಗೆ ವಿಜಿ ತಲುಪಿಸುತ್ತಿದ್ದಾಳೆ. ದೂರದಲ್ಲಿದ್ದರೂ, ಪ್ರತಿಯೊಂದು ಕ್ಷಣವೂ ನಾನು ನಿಮ್ಮ ಉಪಸ್ಥಿತಿಯನ್ನು ಅನುಭವಿಸುತ್ತಿದ್ದೇನೆ. ನಾನು ನಿಮಗೆ ಒಂದೇ ಒಂದು ವಿಷಯ ಹೇಳಬೇಕು… ಯಾರು ಏನೇ ಹೇಳಿದರೂ ದಯವಿಟ್ಟು ಚಿಂತಿಸಬೇಡಿ. ಯಾವುದೇ ಅಪಪ್ರಚಾರ, ಯಾವುದೇ ವದಂತಿ, ಯಾವುದೇ ನಕಾರಾತ್ಮಕತೆಗೆ ನೀವು ಕಿವಿಗೊಡಬೇಡಿ. ನೀವೇ ನನ್ನ ಬಲ… ನೀವುಗಳೇ ನನ್ನ ಕುಟುಂಬ… ಇಂದು ನಾನು ಬಲವಾಗಿ ನಿಂತಿದ್ದೇನೆ ಅಂದ್ರೆ ಅದಕ್ಕೆ ಕಾರಣ ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸ. ಈ ಕ್ಷಣದಲ್ಲಿ ನನ್ನ ದೊಡ್ಡ ಶಕ್ತಿ ನೀವು. ಆದ್ದರಿಂದ, ದಯವಿಟ್ಟು ಯಾವುದಕ್ಕೂ ಚಿಂತೆ ಮಾಡದೆ, ನಿಮ್ಮ ಪ್ರೀತಿ ಮತ್ತು ಶಕ್ತಿಯನ್ನು ನಮ್ಮ ಚಿತ್ರ ‘ದಿ ಡೆವಿಲ್’ ಕಡೆಗೆ ಹರಿಸಿ.
