ಉದಯವಾಹಿನಿ, ಕ್ಯಾನ್ಬೆರಾ: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಇಬ್ಬರು ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಗೆ 10 ಮಂದಿ ಬಲಿಯಾಗಿದ್ದಾರೆ. ಜನರ ಗುಂಪಿನ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದರು. ಜನಸಮೂಹದ ಮೇಲೆ ಮನಬಂದಂತೆ ಸುಮಾರು 50 ಗುಂಡುಗಳನ್ನು ಹಾರಿಸಲಾಯಿತು. ಬೋಂಡಿಯಲ್ಲಿನ ಘಟನೆ ಆಘಾತಕಾರಿ ಮತ್ತು ದುಃಖಕರ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ವಿಷಾದ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಜೀವ ಉಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಇಬ್ಬರು ಶೂಟರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸ್ ನಿರ್ದೇಶನಗಳನ್ನು ಪಾಲಿಸುವಂತೆ ಜನತೆಯಲ್ಲಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಎಂಟು ದಿನಗಳ ಯಹೂದಿ ಹಬ್ಬ ಹನುಕ್ಕಾದ ಮೊದಲ ರಾತ್ರಿ ಗುಂಡಿನ ದಾಳಿ ನಡೆಸಲಾಗಿದೆ. ಯಹೂದಿ ಹಬ್ಬದ ಆರಂಭವನ್ನು ಗುರುತಿಸಲು ಕಡಲತೀರದ ಕಾರ್ಯಕ್ರಮಕ್ಕಾಗಿ ನೂರಾರು ಜನರು ಸಮುದ್ರತೀರದಲ್ಲಿ ಜಮಾಯಿಸಿದ್ದರು. ಈ ವೇಳೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
