ಉದಯವಾಹಿನಿ, ಇಟಾನಗರ: ಪಾಕಿಸ್ತಾನಕ್ಕೆ ಗೂಢಚಾರಿಕೆ ಮಾಡಿರುವ ಆರೋಪದ ಮೇಲೆ ಭಾರತೀಯ ವಾಯುಸೇನಾ ನಿವೃತ್ತ ಅಧಿಕಾರಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತೆಜ್ಪುರದ ಪಾಟಿಯಾ ಪ್ರದೇಶದ ನಿವಾಸಿ ಕುಲೆಂದ್ರ ಶರ್ಮಾ ಎಂದು ಗುರುತಿಸಲಾಗಿದೆ. ಶರ್ಮಾನ ಚಲನವಲನಗಳನ್ನು ನಿರಂತರವಾಗಿ ಪೊಲೀಸರು ಗಮನಿಸುತ್ತಿದ್ದರು. ಪ್ರಾಥಮಿಕ ತನಿಖೆಯ ನಂತರ ಆತನನ್ನು ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ವ್ಯಕ್ತಿಯ ಮೇಲೆ ಕೆಲವು ದಿನಗಳಿಂದ ನಿಗಾ ಇರಿಸಲಾಗಿತ್ತು. ಆತ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳ ಜತೆ ಸಂಪರ್ಕದಲ್ಲಿದ್ದು, ಅವರಿಗೆ ಸೂಕ್ಷ್ಮ ಮಾಹಿತಿಯನ್ನು ಪೂರೈಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಆತನ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಿಂದ ಅನುಮಾನಾಸ್ಪದ ಡೇಟಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಕೆಲವು ಡೇಟಾವನ್ನು ಅಳಿಸಲಾಗಿದೆ ಎಂದು ಶಂಕಿಸಲಾಗಿದೆ. ಶರ್ಮಾಗೆ ಪಾಕಿಸ್ತಾನದವರ ಜತೆ ಸಂಪರ್ಕವಿದೆ ಎಂಬ ಅನುಮಾನ ಪ್ರಬಲವಾಗಿದ್ದರೂ, ತನಿಖೆ ಪೂರ್ಣಗೊಳ್ಳುವವರೆಗೆ ಅದನ್ನು ದೃಢಪಡಿಸಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಹರಿಚರಣ್ ಭೂಮಿಜ್ ಹೇಳಿದರು.
